ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ
ಮಂಗಳೂರು, ಎ. 12: ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ರಚಿಸಿರುವ ಪೋಕ್ಸೊ ಅತ್ಯಂತ ಪ್ರಬಲ ಕಾನೂನಾಗಿದ್ದರೂ ಆರೋಪಿಗಳು ಜಾಮೀನು ಮೂಲಕ ಬಿಡುಗಡೆಯಾಗುತ್ತಿರುವುದು ಮತ್ತು ಕೇಸು ಬಿಟ್ಟು ಹೋಗುತ್ತಿರುವುದು ಖೇದಕರ ಎಂದು ಲೇಡಿಗೋಷನ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯೆ ಡಾ.ಪೂರ್ಣಿಮಾ ಜೆ. ಹೇಳಿದ್ದಾರೆ.
ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿದಿನ ಹೆಣ್ಣುಮಕ್ಕಳಂತೆ ಗಂಡು ಮಕ್ಕಳ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಇಂಥವರಿಗೆ ನಮ್ಮಿಂದಾಗುವಷ್ಟು ಸಹಾಯ ಮಾಡಬೇಕು. ಪ್ರಕರಣಗಳನ್ನು ಬೆಳಕಿಗೆ ತಂದು ನ್ಯಾಯ ಒದಗಿಸುವಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಹತ್ವದ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.
ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಆಶಾ ಕಾರ್ಯಕರ್ತೆಯರ ಸಂಘಟಿತ ಹೋರಾಟದ ಫಲವಾಗಿ ಕಳೆದ ಬಜೆಟ್‌ನಲ್ಲಿ ಸಿಎಂ ಒಂದು ಸಾವಿರ ರೂ. ಹೆಚ್ಚುವರಿ ಗೌರವಧನ ಘೋಷಿಸಿದ್ದು, ಇದರ ಜತೆಗೆ ಸಮವಸ್ತ್ರ, ಬ್ಯಾಗ್ ಹಾಗೂ ಕೊಡೆಯೂ ಲಭ್ಯವಾಗಲಿದೆ. ಮುಂದೆ ಇನ್ನೂ ಹೆಚ್ಚಿನ ಬೇಡಿಕೆಗಳನ್ನು ಸರಕಾರದ ಮುಂದಿಡಲಿದ್ದೇವೆ ಎಂದರು.
ಸರಕಾರ 35 ಸಾವಿರ ಆಶಾ ಕಾರ್ಯಕರ್ತೆಯರಿಗಾಗಿ ವಾರ್ಷಿಕ 100 ಕೋಟಿ ರೂ. ವ್ಯಯಿಸುತ್ತಿದೆ. ಮುಂದಿನ ದಿನಗಳಲ್ಲಿ ವಸತಿ ಹಾಗೂ ನಿವೇಶನ ವಂಚಿತರಿಗೆ ಅದನ್ನು ಒದಗಿಸುವ ಕಾರ್ಯ ಮಾಡಲಾಗುತ್ತದೆ. ಜತೆಗೆ ಆರೋಗ್ಯ ಸೇವೆಯೂ ಲಭ್ಯವಾಗಲಿದೆ ಎಂದು ವಿವರಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಸುಜಾತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಐಯುಟಿಯುಸಿಯ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್, ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶೋಭಾ, ಬಬಿತಾ, ಹೇಮಲತಾ, ಕಾರ್ಯದರ್ಶಿ ಮೀನಾಕ್ಷಿ, ತಾಲೂಕು ಅಧ್ಯಕ್ಷ ಜಯಲಕ್ಷ್ಮೀ ಮಂಗಳೂರು, ಸರಸ್ವತಿ ಸುಳ್ಯ, ಭಾರತಿ ಕೆ. ಬೆಳ್ತಂಗಡಿ, ಉಷಾ ಮಂಗಳೂರು ನಗರ, ಸುಲೋಚನಾ ಪುತ್ತೂರು, ಭವಾನಿ ಉಪಸ್ಥಿತರಿದ್ದರು.
ತಿರುಮಲೇಶ್ವರಿ ಸ್ವಾಗತಿಸಿದರು.







