2,240 ಕೋ.ರೂ.ವಂಚನೆ ಪ್ರಕರಣ : ನಾಲ್ವರ ಬಂಧನ
ಹೊಸದಿಲ್ಲಿ, ಎ.12: ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 2,240 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೂರ್ಯ ವಿನಾಯಕ್ ಇಂಡಸ್ಟ್ರೀಸ್ ನ ನಾಲ್ವರು ನಿರ್ದೇಶಕರನ್ನು ಸಿಬಿಐ ಬಂಧಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಜಯ್ ಜೈನ್, ರಾಜೀವ್ ಜೈನ್, ರೋಹಿತ್ ಚೌಧರಿ ಮತ್ತು ಸಂಜೀವ್ ಅಗರ್‌ವಾಲ್ ಎಂಬವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಬ್ಯಾಂಕ್‌ನಿಂದ ಹಣ ಪಡೆಯುವ ಸಲುವಾಗಿ ಈ ನಾಲ್ವರು ಆರೋಪಿಗಳು ಸುಮಾರು 100ಕ್ಕೂ ಹೆಚ್ಚು ಬೇನಾಮಿ ಸಂಸ್ಥೆಗಳನ್ನು ಬಳಸಿಕೊಂಡಿದ್ದು, ಒಟ್ಟು 2,240 ಕೋಟಿ ರೂ. ಯನ್ನು ಬ್ಯಾಂಕಿನಿಂದ ಪಡೆದಿದ್ದರು ಎಂದು ಬ್ಯಾಂಕ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಇವರು ವಿದೇಶದಲ್ಲಿ ಸ್ಥಾಪಿಸಿರುವ ಆರು ಸಂಸ್ಥೆಗಳಿಗೆ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪದಲ್ಲಿ 300 ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದರು ಎಂದು ದೂರಲಾಗಿದೆ. ಈ ಸಂಸ್ಥೆಗಳು ಯಾವುದೇ ವ್ಯವಹಾರ ನಡೆಸುತ್ತಿಲ್ಲ ಎಂದು ಸಿಬಿಐ ತಿಳಿಸಿದೆ. ...................................
ಆರೆಸ್ಸೆಸ್ ಮುಖಂಡನ ವಿರುದ್ಧ ತೆರಿಗೆ ಇಲಾಖೆ ತನಿಖೆ
ಹೊಸದಿಲ್ಲಿ, ಎ.12: ಅಧಿಕ ವೌಲ್ಯದ ನೋಟುಗಳನ್ನು ನಿಷೇಧ ಮಾಡಿದ ಬಳಿಕ 17 ಕೋಟಿ ರೂಪಾಯಿ ವೌಲ್ಯದ ಹಳೆ ನೋಟುಗಳನ್ನು ಠೇವಣಿ ಮಾಡಿದ ಆರೆಸ್ಸೆಸ್ ಮುಖಂಡರಿಗೆ ಸೇರಿದ ಜವಳಿ ಕಂಪೆನಿಯೊಂದರ ಬಗ್ಗೆ ಇದೀಗ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.
ಅಹುಜಾಸನ್ಸ್ ಶಾಲ್‌ವಾಲೆ ಪ್ರೈವೆಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಕುಲಭೂಷಣ್ ಅಹುಜಾ ಅವರು ಆರೆಸ್ಸೆಸ್‌ನ ದಿಲ್ಲಿ ಪ್ರಾಂತ ಸಂಘ ಚಾಲಕ ಅಂದರೆ ದಿಲ್ಲಿ ರಾಜ್ಯದ ಮುಖ್ಯಸ್ಥ. ಕಂಪೆನಿ ದಾಖಲೆಗಳ ಪ್ರಕಾರ, ಕಂಪೆನಿಗೆ ಇತರ ಮೂವರು ನಿರ್ದೇಶಕರಿದ್ದಾರೆ. ಅಹುಜಾ ಅವರ ಮಕ್ಕಳಾದ ಭುವನ್ ಹಾಗೂ ಕರಣ್ ಮತ್ತು ಸೊಸೆ ನಿಧಿ.
ಈ ಕಂಪೆನಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 6 ಕೋಟಿ ರೂಪಾಯಿಗಳನ್ನು ಠೇವಣಿ ಮಾಡಿತ್ತು ಎನ್ನಲಾಗಿದೆ. ಪಾಶ್ಮಿನಾ ಶಾಲು ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಹುಜಾಸನ್ಸ್ ಶಾಲ್‌ವಾಲೆ, ಕರೋಲ್‌ಬಾಗ್ ಹಾಗೂ ಖಾನ್‌ಮಾರ್ಕೆಟ್‌ನಲ್ಲಿ ಷೋರೂಂ ಹೊಂದಿದೆ. ಬಾಲ್ಯದಿಂದಲೇ ಅಹುಜಾ ಆರೆಸ್ಸೆಸ್ ಕಾರ್ಯಕರ್ತ.
ಆದರೆ ಐಟಿ ದಾಳಿ ಅಥವಾ ತನಿಖೆ ಬಗ್ಗೆ ಪ್ರತಿಕ್ರಿಯಿಸಲು ಅಹುಜಾ ನಿರಾಕರಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132 ಅನ್ವಯ ಅಹುಜಾ ಅವರ ಷೋರೂಂಗಳ ಮೇಲೆ ಫೆಬ್ರವರಿ 22ರಂದು ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಕಂಪೆನಿ ನಕಲಿ ಬಿಲ್ ಸೃಷ್ಟಿಸಿ ಹಳೆ ನೋಟುಗಳನ್ನು ಸಮರ್ಥಿಸಿಕೊಂಡಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ನೋಟು ನಿಷೇಧದ ಬಳಿಕ ಕಂಪೆನಿ ಸುಮಾರು 17 ಕೋಟಿ ರೂಪಾಯಿ ವೌಲ್ಯದ ಹಳೆ ನೋಟುಗಳನ್ನು ಠೇವಣಿ ಮಾಡಿತ್ತು.