ಗೋ ಹತ್ಯೆ ನಿಷೇಧಕ್ಕೆ ಎಎಂಯು ವಿದ್ಯಾರ್ಥಿ ಒಕ್ಕೂಟದ ಆಗ್ರಹ
ಆಲಿಗಡ,ಎ.12: ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಲಿಗಡ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟ(ಎಎಂಎಸ್‌ಯು)ದ ಅಧ್ಯಕ್ಷ ಫೈಝುಲ್ ಹಸನ್ ಬುಧವಾರ ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಕಚೇರಿಯ ಮುಂದೆ ಎಎಂಎಸ್‌ಯು ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು ಹಿಂದೂ ಸಹೋದರರ ಭಾವನೆಗಳನ್ನು ಗೌರವಿಸಿ, ಗೋಹತ್ಯೆಯನ್ನು ನಿಷೇಧಿಸುವ ಕೇಂದ್ರ ಸರಕಾರದ ಯಾವುದೇ ಕ್ರಮವನ್ನು ಬೆಂಬಲಿಸುವುದಾಗಿ ಹೇಳಿದರು.
ಗೋಮಾಂಸದ ರಫ್ತು ಹಾಗೂ ಆಮದನ್ನು ಸಂಪೂರ್ಣ ನಿಷೇಧಿಸುವುದನ್ನು ಹಾಗೂ ಗೋಮಾಂಸವನ್ನು ರಫ್ತು ಮಾಡುವ ಕಸಾಯಿಖಾನೆಗಳ ಮುಚ್ಚುಗಡೆಗೊಳಿಸುವಂತೆಯೂ ಫೈಝುಲ್ ಹಸನ್ ಈ ಸಂದರ್ಭದಲ್ಲಿ ಆಗ್ರಹಿಸಿದರು.
ತಥಾಕಥಿತ ಗೋರಕ್ಷಕರು ದೇಶಾದ್ಯಂತ ನಿರಂತರವಾಗಿ ಕಾನೂನು ಕೈಗೆತ್ತಿಕೊಳ್ಳುತ್ತಿದ್ದು, ಕಸಾಯಿಖಾನೆಗಳಿಗೆ ಜಾನುವಾರುಗಳ ಸಾಗಣೆಯು ಕೋಮುಘರ್ಷಣೆಗೆ ಕಾರಣವಾಗುತ್ತಿದೆಯೆಂದು ಎಎಂಎಸ್‌ಯು ನಾಯಕ ಆತಂಕ ವ್ಯಕ್ತಪಡಿಸಿದರು. ಗೋರಕ್ಷಕರು ಎಸಗುವ ಹಿಂಸಾಚಾರದ ಪ್ರಕರಣಗಳ ವಿಚಾರಣೆಗೆ ಕ್ಷಿಪ್ರ ವಿಚಾರಣಾ ನ್ಯಾಯಾಲಯಗಳ ಸ್ಥಾಪನೆಗೆ ಆಗ್ರಹಿಸಿ ಫೈಝುಲ್ ಹಸನ್ ಅವರು ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್ ಮೂಲಕ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು. ಗೋರಕ್ಷಣೆಯ ಹೆಸರಿನಲ್ಲಿ ಆಡಳಿತೇತರ ಶಕ್ತಿಗಳು ಭಯೋತ್ಪಾದನೆಯನ್ನು ಹರಡುತ್ತಿವೆ ಹಾಗೂ ನೆಲದ ಶಾಂತಿಗೆ ಬೆದರಿಕೆಯೊಡ್ಡಿವೆಯೆಂದು ಮನವಿಯು ಆರೋಪಿಸಿದೆ.
ಅಲ್ಪಸಂಖ್ಯಾತರು ಹಾಗೂ ಇತರ ದುರ್ಬಲ ವರ್ಗಗಳ ವಿರುದ್ಧದ ಕ್ರೌರ್ಯವನ್ನು ತಡೆಗಟ್ಟಲು ನೂತನ ಕಾನೂನೊಂದನ್ನು ರೂಪಿಸುವಂತೆಯೂ ಮನವಿಯು ಆಗ್ರಹಿಸಿದೆ.





