ವಾಮಾಚಾರದ ಶಂಕೆ: ದಂಪತಿಗೆ ಹಲ್ಲೆ; ಜೀವಂತ ಸಮಾಧಿಗೆ ವಿಫಲ ಯತ್ನ
ಗುವಾಹಟಿ, ಎ.12: ವಾಮಾಚಾರದಲ್ಲಿ ತೊಡಗಿದ್ದಾರೆಂಬ ಶಂಕೆಯಲ್ಲಿ ಓರ್ವ ಮಧ್ಯವಯಸ್ಕ ಹಾಗೂ ಆತನ ಪತ್ನಿಯನ್ನು ಮರಳಿನಲ್ಲಿ ಭಾಗಶಃ ಸಮಾಧಿ ಮಾಡಿ, ಚಿತ್ರಹಿಂಸೆ ನೀಡಿದ ಘಟನೆ ಅಸ್ಸಾಂನಲ್ಲಿ ಬುಧವಾರ ನಡೆದಿದೆ.
ಲಖಿಂಪುರ್ ಜಿಲ್ಲೆಯ ಮೊಯಿನಾಗುರಿ ಗ್ರಾಮದಲ್ಲಿ ಮುಂಜಾವು 2:00 ಗಂಟೆಯ ವೇಳೆ ಈ ಘಟನೆ ನಡೆದಿದೆ. ಗ್ರಾಮಸ್ಥರಿಂದ ಚಿತ್ರಹಿಂಸೆಗೊಳಗಾದ ದಂಪತಿಯನ್ನು ಬ್ರಜೆನ್ ದೊಲೆ (40) ಹಾಗೂ ದುರ್ಗೇಶ್ವರಿ (35) ಎಂದು ಗುರುತಿಸಲಾಗಿದೆ. ಅವರ ಸಂಬಂಧಿ ಅಮಿಯೊ ದೊಲೆ (32) ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಬಳಿಕ ಗ್ರಾಮಸ್ಥರು ದಂಪತಿಯನ್ನು ಮರಳಿನ ಗುಂಡಿಯಲ್ಲಿ ಕಂಠಮಟ್ಟದವರೆಗೂ ಹೂತು ಹಾಕಿದರು. ಆನಂತರ ಇತರ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬಂದು ಅವರನ್ನು ಪಾರು ಮಾಡಿದರೆಂದು ಸ್ಥಳೀಯ ಠಾಣಾಧಿಕಾರಿ ಹೇಮಂತ ಕುಮಾರ್ ದಾಸ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರಿಗೆ ಮುಂಜಾನೆ 4:00 ಗಂಟೆಯ ವೇಳೆಗೆ ಮಾಹಿತಿ ದೊರೆತಿತ್ತು. ಘಟನೆಗೆ ಸಂಬಂಧಿಸಿ ಈ ತನಕ ಯಾರನ್ನೂ ಬಂಧಿಸಲಾಗಿಲ್ಲವಾದರೂ, ಕೆಲವು ಗ್ರಾಮಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಹೇಮಂತ ಕುಮಾರ್ ದಾಸ್ ತಿಳಿಸಿದ್ದಾರೆ.





