ಪೆರಂಪಳ್ಳಿಯಲ್ಲಿ ಕೃಷಿ ಮಾಹಿತಿ ಶಿಬಿರ

ಉಡುಪಿ, ಎ.12: ಬಿತ್ತನೆ ಬೀಜವನ್ನು ಉಪ್ಪುನೀರಲ್ಲಿ ನೆನೆಸಿಟ್ಟು, ತೇಲುವ ಜೊಳ್ಳು ಬೀಜ ಬೇರ್ಪಡಿಸುವ, ಬಿತ್ತುವ, ನಾಟಿ ಮಾಡುವ ಹೊಲದಲ್ಲಿ ಸುಡುಮಣ್ಣು ಮಾಡದಿರುವುದು ಮುಂತಾದ ಕ್ರಮಗಳು ಸಣ್ಣದೆಂದು ಕಂಡರೂ ಈ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ಭತ್ತದ ಕೃಷಿಯಲ್ಲಿ ನಷ್ಟದ ಮಾತೇ ಇಲ್ಲ ಎಂದು ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಹೇಳಿದ್ದಾರೆ.
ಪೆರಂಪಳ್ಳಿಯಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆರಂಪಳ್ಳಿ, ಶೀಂಬ್ರ, ಕಕ್ಕುಂಜೆ ಪ್ರದೇಶಗಳ ಎಲ್ಲಾ ಕೃಷಿಕರನ್ನು ಒಗ್ಗೂಡಿಸಲು ಈ ಪ್ರದೇಶದ ಯುವಕ-ಯುವತಿ ಮಂಡಲಗಳು ಒಗ್ಗೂಡಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಹಿರಿಯ ಕೃಷಿಕ ಅಂತಪ್ಪ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗರಸಭಾ ಸದಸ್ಯ ಪ್ರಶಾಂತ್ ಭಟ್, ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಕರಂಬಳ್ಳಿ, ಹಿರಿಯ ಕೃಷಿಕರಾದ ಸೋಮಪ್ಪ ಪೂಜಾರಿ, ಲೂವಿಸ್ ಡಿಸೋಜಾ, ದುಗ್ಗಪ್ಪ ಪೂಜಾರಿ, ಬಾಬು ನಾಯ್ಕಿ ಉಪಸ್ಥಿತರಿದ್ದರು.
ಈ ವೇಳೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿಯನ್ನು ರಚಿಸಲಾಯಿತು.ಗೌರವ ಅಧ್ಯಕ್ಷರಾಗಿ ಅಂತಪ್ಪ ಪೂಜಾರಿ, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶ್ರೀಯಾನ್, ಉಪಾಧ್ಯಕ್ಷರಾಗಿ ಬೆನೆಡಿಕ್ಟ್ ಡಿಸೋಜಾ, ಶಂಕರ್ ಸುವರ್ಣ, ಜೋಸೆಪ್ ಮಸ್ಕರೇನಸ್, ವಿಲಿಯಂ ಡಿಸೋಜಾ, ಕಾರ್ಯದರ್ಶಿ ರವೀಂದ್ರ ಪೂಜಾರಿ ಶೀಂಬ್ರ, ಉಪಕಾರ್ಯದರ್ಶಿ ರಪಾಯಿಲ್ ಡಿಸೋಜಾ, ಮಹಿಳಾ ಘಟಕದ ಮುಂದಾಳುಗಳಾಗಿ ಶಾಂತಿ ಡಿಸೋಜಾ, ಪುಷ್ಪಾವತಿ ಮತ್ತು ಪ್ರೇಮ ಶೀಂಬ್ರರನ್ನು ಆಯ್ಕೆ ಮಾಡಲಾಯಿತು.
ಮಲ್ಲಂಪಳ್ಳಿ ಶ್ರೀನಿವಾಸ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿದರು.ರವೀಂದ್ರ ಗುಜ್ಜರಬೆಟ್ಟು ನಿರೂಪಿಸಿದರು.







