ದ.ಕ. ಜಿಲ್ಲಾ ಕಾರಾಗೃಹದ ಭದ್ರತಾ ಲೋಪ: 15 ತಿಂಗಳಲ್ಲಿ 18 ಪ್ರಕರಣ ದಾಖಲು

ಮಂಗಳೂರು, ಎ.12: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ 15 ತಿಂಗಳಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬರ್ಕೆ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದು, ಇದು ಕಾರಾಗೃಹದ ಭದ್ರತಾ ಲೋಪಕ್ಕೆ ಸಾಕ್ಷಿಯಾಗಿದೆ.
2016ರ ಜನವರಿಯಿಂದ 2017ರವರೆಗೆ ಮಾರ್ಚ್‌ವರೆಗೆ ದಾಖಲಾದ ವಿವಿಧ ಪ್ರಕರಣಗಳ ಪೈಕಿ ಖೈದಿಗಳ ಸಂದರ್ಶನದ ವೇಳೆ ಗಾಂಜಾ ಪೂರೈಕೆ ಪ್ರಕರಣವೇ ಹೆಚ್ಚು. ಇದರಲ್ಲಿ ಮಹಿಳೆಯರ ಮೇಲೂ ಪ್ರಕರಣ ದಾಖಲಾಗಿತ್ತು ಎಂಬುದು ಗಮನಾರ್ಹ. ಇನ್ನುಳಿದಂತೆ ಜೈಲಿನೊಳಗೆ ಚಾಕು, ಮೊಬೈಲ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ನೈಟ್ರೋವೆಟ್ ಟ್ಯಾಬ್ಲೆಟ್ ರವಾನೆಯೂ ಸೇರಿದೆ.
ಅದಲ್ಲದೆ ಪೊಲೀಸರು ತಪಾಸಣೆ ನಡೆಸಿದ ವೇಳೆ ಗಾಂಜಾ, ಮೊಬೈಲ್, ಸಿಮ್‌ಕಾರ್ಡ್ ಪತ್ತೆಯಾಗಿದ್ದಲ್ಲದೆ, ಕೈದಿಗಳ ಮಧ್ಯೆ ಹೊಡೆದಾಟ, ಸಿಬ್ಬಂದಿ ವರ್ಗಕ್ಕೆ ಹಲ್ಲೆ, ಜೈಲಿನಿಂದ ಕೈದಿ ಪರಾರಿ ಪ್ರಕರಣವೂ ದಾಖಲಾಗಿದೆ.
ಭದ್ರತಾ ಲೋಪ: ಜಿಲ್ಲಾ ಕಾರಾಗೃಹದಲ್ಲಿ ಪದೇ ಪದೇ ಇಂತಹ ಪ್ರಕರಣ ದಾಖಲಾಗಲು ಭದ್ರತಾ ಲೋಪವೇ ಕಾರಣವಾಗಿದೆ. ಜೈಲಿನ ಭದ್ರತೆಗಾಗಿ ಬಂದಿಖಾನೆ ಇಲಾಖೆಯು ವಿವಿಧ ಕ್ರಮಗಳನ್ನು ಜರಗಿಸಿದೆ ಎಂದು ಹೇಳಿಕೊಳ್ಳುತ್ತಲೇ ಇವೆ. ಆದರೆ, ಭದ್ರತಾ ಲೋಪ ಮುಂದುವರಿದಿರುವುದಕ್ಕೆ ಜೈಲಿನ ಹಿರಿಯ ಅಧಿಕಾರಿಗಳ ತಲೆದಂಡವೇ ಸಾಕ್ಷಿ.
ಜೈಲಿನಲ್ಲಿ ಭದ್ರತೆಗಾಗಿ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ಸ್, ಡೋರ್ ಪ್ರೈಮ್ ಮೆಟಲ್ ಡಿಟೆಕ್ಟರ್ಸ್, ಬ್ಯಾಗೇಜ್ ಸ್ಕಾನರ್, ಸಿಸಿ ಟಿವಿ ಕ್ಯಾಮರಾ, ಮುಖ್ಯ ಹೊರಗೋಡೆಯ ಮೇಲ್ಭಾಗಕ್ಕೆ (ಕನ್ಸರ್ಟಿನಾ ಕ್ವಾಯ್ಲಾ ಫೆನ್ಸಿಂಗ್) ತಂತಿ ಸುರುಳಿಯ ಭದ್ರತೆ , ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಆಗಾಗ ಪೊಲೀಸ್ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತದೆ. ಕಾರಾಗೃಹದ ಭದ್ರತೆಗಾಗಿ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲಾ ಜೈಲಿನಲ್ಲಿ 360 ಕೈದಿಗಳನ್ನಿಡಲು ಮಾತ್ರ ಸ್ಥಳಾವಕಾಶವಿದೆ. ಆದರೆ ಇದೀಗ 420 ಕೈದಿಗಳಿದ್ದಾರೆ. ಅಂದರೆ ಮಿತಿಗಿಂತ 60 ಕೈದಿಗಳು ಹೆಚ್ಚು ಇದ್ದು, ಇದು ಕೂಡ ಸಿಬ್ಬಂದಿ ವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ.
- ಸ್ಥಳಾಂತರಕ್ಕೆ ಅನುದಾನ ನಿರೀಕ್ಷೆ: ಜಿಲ್ಲಾ ಕಾರಾಗೃಹವನ್ನು ಬಂಟ್ವಾಳ ತಾಲೂಕಿನ ಚೇಳೂರು ಮತ್ತು ಕುರ್ನಾಡು ಗ್ರಾಮಕ್ಕೆ ಸ್ಥಳಾಂತರಿಸುವ ಪ್ರಸ್ತಾಪ ನನೆಗುದಿಗೆ ಬಿದ್ದಿದೆ. ಈಗಾಗಲೆ ಈ ಗ್ರಾಮದ 63.89 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಲಾಗಿದೆ. ಈ ಜಮೀನಿನ ಅತಿಕ್ರಮಣ ತಡೆಯಲು ಸುಮಾರು 2 ಕೋ.ರೂ. ವೆಚ್ಚದಲ್ಲಿ ಆವರಣಗೋಡೆ ನಿರ್ಮಿಸಲು ನಿರ್ಧರಿಸಲಾಗಿದೆ.
ಕಾರಾಗೃಹ ನಿರ್ಮಾಣಕ್ಕೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆಯಿಂದ 20,570 ಲಕ್ಷ ರೂ. ಅಂದಾಜು ಪಟ್ಟಿ ಪಡೆಯಲಾಗಿದೆ. ಇದನ್ನು 2017 -18ನೆ ಸಾಲಿನ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದ್ದು, ಆಡಳಿತಾತ್ಮಕ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೊಂದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.







