ಅಜ್ಮೀರ್: ಇನ್ನೂ ಬಳಕೆಯಲ್ಲಿದೆ 445 ವರ್ಷ ಹಳೆಯ ಗೇಟು!
ಅಜ್ಮೀರ್, ಎ.13: ಚಕ್ರವರ್ತಿ ಅಕ್ಬರನ ಕಾಲದ ಅಂದರೆ 445 ವರ್ಷ ಹಳೆಯ ಗೇಟುಗಳನ್ನು ಇನ್ನೂ ಕಾವಲು ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಹೌದು ಇದು ವಿಚಿತ್ರವಾದರೂ ಸತ್ಯ.
ಮೊಘಲ್ ಆಡಳಿತದ ಕಾಲದಲ್ಲಿ ಅಕ್ಬರ್ ಅಜ್ಮೀರ್‌ನಲ್ಲಿ 445 ವರ್ಷಗಳ ಹಿಂದೆ ಕಾವಲು ಉದ್ದೇಶಕ್ಕಾಗಿ ಈ ಗೇಟುಗಳನ್ನು ನಿರ್ಮಿಸಿದ್ದ. ರಾಜಸ್ಥಾನ ಪೊಲೀಸರು ಈ ಐತಿಹಾಸಿಕ ನಿರ್ಮಾಣವನ್ನು ಕಾವಲು ಚೌಕಿಗಳಾಗಿ ಪರಿವರ್ತಿಸಿಕೊಂಡಿದ್ದು, ಈ ಹಳೆ ಗೇಟುಗಳು ಇಂದಿಗೂ ಕಾವಲು ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಅಕ್ಬರ್ ಇಲ್ಲಿಗೆ ಭೇಟಿ ನೀಡುವಾಗಲೆಲ್ಲ ಈ ಗೇಟುಗಳಲ್ಲಿ ರಾಜನ ಕಾವಲುಗಾರರು ಕಾವಲು ಕಾಯುತ್ತಿದ್ದರು. ಅಪರಾಧಿಗಳು ಅಥವಾ ಅನಪೇಕ್ಷಿತ ವ್ಯಕ್ತಿಗಳು ನಗರದೊಳಕ್ಕೆ ಬರುವುದನ್ನು ತಡೆಯಲು ಚೆಕ್‌ಪೋಸ್ಟ್ ಆಗಿಯೂ ಇದು ಬಳಕೆಯಾಗುತ್ತಿದೆ.
ರಾಥೋಡ್, ಮರಾಠಾ ಹಾಗೂ ಬ್ರಿಟಿಷರಿಗೆ ಅಧಿಕಾರ ವರ್ಗಾವಣೆಯಾದರೂ, ಈ ಗೇಟುಗಳು ಮಾತ್ರ ತಮ್ಮ ಪ್ರಾಮುಖ್ಯ ಕಳೆದುಕೊಳ್ಳಲಿಲ್ಲ. ಇಂದು ಕೂಡಾ ತಮ್ಮ ಹಳೆಯ ಕಾರ್ಯವನ್ನೇ ನಿರ್ವಹಿಸುತ್ತಿವೆ.
ಕಮಾನು ರೂಪದ ಈ ಗೇಟುಗಳು 25 ರಿಂದ 30 ಮೀಟರ್ ಎತ್ತರವಿದ್ದು, 1571 ಹಾಗೂ 1572ರ ಮಧ್ಯೆ ನಿರ್ಮಿಸಲಾಗಿದೆ. ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಷ್ತಿ ದರ್ಗಾ ಇರುವ ಹಿನ್ನೆಲೆಯಲ್ಲಿ ಅಕ್ಬರ್‌ಗೆ ಅಜ್ಮೀರ್ ಮಹತ್ವದ ನಗರವಾಗಿತ್ತು. ಆನೆ ಕೂಡಾ ಹಾದು ಹೋಗಬಹುದಾದಷ್ಟು ದೊಡ್ಡ ಈ ಗೇಟುಗಳನ್ನು ಸೂರ್ಯಾಸ್ತದ ಬಳಿಕ ಮುಚ್ಚಲಾಗುತ್ತಿತ್ತು. ಈ ಗೇಟುಗಳ ಪಕ್ಕದಲ್ಲೇ ಕಾವಲುಗಾರರಿಗೆ ಕೊಠಡಿಗಳನ್ನು ಕೂಡಾ ನಿರ್ಮಿಸಲಾಗಿದೆ. ಈ ಪೈಕಿ ದಿಲ್ಲಿ ಗೇಟ್‌ನಲ್ಲಿ ಮೂರು ಕೊಠಡಿಗಳನ್ನು ಮುಖ್ಯ ಕಮಾನಿನ ಒಳಗೆಯೇ ನಿರ್ಮಿಸಲಾಗಿದೆ.