ಹಾವಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಈ ಥಾಯ್ ಯುವಕನ ಕಸರತ್ತು ನೋಡಿ

ಹೊಸದಿಲ್ಲಿ,ಎ.13 : ಥಾಯ್ಲೆಂಡಿನ ವಿಸೆಟ್ ಚಾಯ್ ಚಾನ್ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಸೈಬರ್ ಕೆಫೆಯೊಂದರಲ್ಲಿ ಹಾವು ಇನ್ನೇನು ಕಚ್ಚಬೇಕು ಎನ್ನುವಷ್ಟರಲ್ಲಿ ಆತ ಅದರಿಂದ ಬಚಾವಾಗಲು ಓಡಾಡುವ ದೃಶ್ಯ ಹಾಗೂ ಆತನನ್ನು ನೋಡಿ ಇತರರೂ ಪ್ರಾಣ ಉಳಿಸಿಕೊಳ್ಳಲು ಅಲ್ಲಿದ್ದ ಕುರ್ಚಿ ಮೇಜುಗಳ ಮೇಲೆ ನಿಂತುಕೊಂಡಿರುವ ವೀಡಿಯೋವೊಂದು ವೈರಲ್ ಆಗಿ ಬಿಟ್ಟಿದೆ.
ಆ ವ್ಯಕ್ತಿ ಸಾವಧಾನವಾಗಿ ಸೈಬರ್ ಕೆಫೆಯ ಬಾಗಿಲು ತೆರೆಯುತ್ತಿದ್ದಂತೆಯೇ ಹಾವೊಂದು ಕೂಡ ಆತನ ಜತೆಯೂ ನುಸುಳಿ ಆತನ ಹಿಂದೆ ಛಂಗನೆ ಹಾರಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಹಾವು ತನಗೆ ಇನ್ನೇನು ಹಿಂದಿನಿಂದ ಕಚ್ಚುವುದು ಎಂದು ತಿಳಿದ ಕೂಡಲೇ ಆತ ಓಡಲಾರಂಭಿಸಿದರೂ ಹಾವು ತನ್ನ ಬೆನ್ನು ಬಿಡುವುದಿಲ್ಲ ಎಂದು ಅರಿತ ಆತ ನೆಲಕ್ಕುರುಳಿ ಹೇಗಾದರೂ ಮಾಡಿ ಹಾವು ದೂರ ಓಡುವಂತೆ ಮಾಡುತ್ತಾನೆ.
ಈ ಅನಿರೀಕ್ಷಿತ ಘಟನೆಯಿಂದ ದಂಗಾದ ಅಲ್ಲಿದ್ದ ಯುವಕರು ಹಾವನ್ನು ಹುಡುಕಿದರೂ ಅದು ಕಾಣದೇ ಇದ್ದಾಗ ಜೀವ ಉಳಿಸಿಕೊಳ್ಳಲು ಕುರ್ಚಿ ಮೇಜುಗಳ ಮೇಲೆ ನಿಂತಿರುವ ದೃಶ್ಯ ಹಾಸ್ಯಮಯವಾಗಿ ಕಂಡು ಬರುವುದಾದರೂ ಹಾವನ್ನು ಕಂಡರೆ ಭಯ ಪಡುವವರು ಯಾರೇ ಆದರೂ ಇದೇ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ನಿಜ.