ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಎ.13: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಂದಿನ ಸಿಎಂ ಎಂದು ಹೇಳುತ್ತಾ ಇದ್ದರು. ಆದರೆ ಮತದಾರರು ಕಾಂಗ್ರೆಸ್ ನ ಕೈ ಹಿಡಿದಿದ್ದಾರೆ. ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರು ಮನಸ್ಸು ಮಾಡದಿದ್ದರೆ ಯಾರೂ ಏನು ಮಾಡಲಾಗಲ್ಲ. ಉಪಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‌ಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ವೈಯಕ್ತಿಕ ಟೀಕೆಗೆ ಜನ ಮನ್ನಣೆ ನೀಡಿಲ್ಲ.ಜಾತಿ, ಮತ ಧರ್ಮಕ್ಕೆ ಮತದಾರರು ಮತ ನೀಡಲಿಲ್ಲ. ನಾವು ಯಾವತ್ತೂ ವೈಯಕ್ತಿಕ ದಾಳಿ ಮಾಡಿರಲಿಲ್ಲ.ಆದ್ರೆ ಶ್ರೀನಿವಾಸ್ ವೈಯಕ್ತಿಕವಾಗಿ ನನ್ನನ್ನು ಟೀಕಿಸಿದರೂ ಮತದಾರರು ಅವರನ್ನು ತಿರಸ್ಕರಿಸಿದರು ಎಂದರು.
ರಾಜ್ಯದ ಮತದಾರರು ತುಂಬಾನೇ ಬುದ್ಧಿವಂತರು. ಬಿಎಸ್‌ವೈ ಮಾತಿಗೆ ಮತದಾರರು ಸೊಪ್ಪು ಹಾಕಲಿಲ್ಲ.ಉತ್ತರ ಪ್ರದೇಶದ ರೀತಿ ಕರ್ನಾಟಕದಲ್ಲಿ ನಡೆಯದು. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿ ಆಘಾತಗೊಂಡಿದೆ. ರಾಜ್ಯದಲ್ಲಿ ಕಾಂಗ್ರಸ್ ಬಲಿಷ್ಠವಾಗಿದೆ. 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಏಕಾಂಗಿ ಹೋರಾಟ ನಡೆಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು.





