ತರಕಾರಿ ಮಾರಾಟ ಮಾಡುವ ರೈತರಿಗೆ ಪೊಲೀಸರ ಕಿರುಕುಳ ಆರೋಪ: ಕ್ರಮ ಕೈಗೊಳ್ಳುವಂತೆ ಮನವಿ
.jpg)
ಸಾಗರ, ಎ.13: ನಗರಸಭೆ ಎದುರಿನ ಚಾಮರಾಜಪೇಟೆ ರಸ್ತೆಯ ಇಕ್ಕೆಲಗಳಲ್ಲಿ ರೈತರಿಗೆ ತರಕಾರಿ ಮಾರಾಟ ಮಾಡುವುದಕ್ಕೆ ಪೊಲೀಸರು ಕಿರುಕುಳ ನೀಡುತ್ತಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ಸಾಗರ ನಗರಕ್ಕೆ ಸಮೀಪ ಇರುವ ಗ್ರಾಮಗಳಾದ ವಡ್ನಾಲ, ಕೌತಿ, ಕರ್ಕಿಕೊಪ್ಪ, ಕುಗ್ವೆ, ಬರದವಳ್ಳಿ, ಜನ್ನೆಹಕ್ಲು, ಸುಂಕದೇವರಕೊಪ್ಪ ಸೇರಿದಂತೆ ಕೆಲವು ಗ್ರಾಮದ ರೈತರು ಹತ್ತಾರು ವರ್ಷಗಳಿಂದ ತಾವು ಬೆಳೆದ ತಾಜಾ ತರಕಾರಿಗಳನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ. ರೈತರು ಸಾವಯವ ಕೃಷಿ ಪದ್ಧತಿಯಡಿ ಬೆಳೆದ ತರಕಾರಿ ಖರೀದಿಗೆ ಸಾರ್ವಜನಿಕರು ಸಹ ಬರುತ್ತಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ತರಕಾರಿ ಮಾರಾಟ ಮಾಡುತ್ತಿದ್ದ ರೈತರಿಗೆ ಪೊಲೀಸ್ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ನಗರಸಭೆ ಎದುರಿನ ಚಾಮರಾಜಪೇಟೆ ರಸ್ತೆಯ ಪಕ್ಕ ತರಕಾರಿ ಮಾರಾಟ ಮಾಡುತ್ತಿದ್ದ ರೈತರಿಗೆ ಯಾರದ್ದೋ ಕುಮ್ಮಕ್ಕಿನಿಂದ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿ, ತರಕಾರಿ ಹಾಗೂ ತಕ್ಕಡಿಯನ್ನು ಕಾಲಿನಿಂದ ಒದ್ದು, ರೈತರಿಗೆ ಅವಾಚ್ಯ ಶಬ್ದದಿಂದ ನಿಂದಿಸಿರುತ್ತಾರೆ. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ರೈತರು ತಾವು ಬೆಳೆದ ತರಕಾರಿಯನ್ನು ಮಾರಾಟಕ್ಕೆ ತರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ರೈತರಿಗಾಗಿ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ತರಕಾರಿ ಮಾರಾಟ ಮಾಡಲು ರೈತ ಸಂತೆಯನ್ನು ನಿರ್ಮಾಣ ಮಾಡಿಕೊಡಬೇಕು. ಹಾಲಿ ಚಾಮರಾಜಪೇಟೆಯಲ್ಲಿ ರೈತರು ತರಕಾರಿ ಮಾರಾಟ ಮಾಡಲು ಅವಕಾಶ ಕೊಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಪೊಲೀಸ್ ಇಲಾಖೆಯಿಂದ ಅಥವಾ ನಗರಸಭೆ ಅಧಿಕಾರಿಗಳಿಂದ ತೊಂದರೆ ನೀಡಿದರೆ ರೈತ ಸಂಘ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮನವಿ ಸಲ್ಲಿಸುವ ಸಂದರ್ಭ ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಗೂರಲಕೆರೆ, ಕಾರ್ಯಾಧ್ಯಕ್ಷ ಕನ್ನಪ್ಪ ಸುಂಕದೇವರಕೊಪ್ಪ, ಕಾರ್ಯದರ್ಶಿ ಅಣ್ಣಪ್ಪ, ಪ್ರಮುಖರಾದ ನಾಗರಾಜ ತೊರಗೋಡು, ನಾರಾಯಣಪ್ಪ ಪಡವಗೋಡು, ಮಂಜಪ್ಪ, ಚಂದ್ರಶೇಖರ್, ಗಣಪತಿ, ಕೃಷ್ಣಮೂರ್ತಿ, ದುರ್ಗಪ್ಪ, ಕೃಷ್ಣಪ್ಪ ಇನ್ನಿತರರು ಹಾಜರಿದ್ದರು.







