ಬಹರೈನ್: ಮನೆಕೆಲಸದವಳನ್ನೇ ಬಹುಮಾನ ಘೋಷಿಸಿದ್ದ ಮಾನವ ಸಂಪನ್ಮೂಲ ಸಂಸ್ಥೆಯ ಲೈಸೆನ್ಸ್ ರದ್ದು

ಮನಾಮ,ಎ.13: ಇಲ್ಲಿನ ಮಾನವ ಸಂಪನ್ಮೂಲ ಕಂಪೆನಿಯೊಂದು ಮನೆಕೆಲಸದ ಮಹಿಳೆಯನ್ನೇ ಬಹುಮಾನ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿ ಬೇಸ್ತು ಬಿದ್ದಿದೆ. ಇನ್ಸ್ಟ್‌ಗ್ರಾಂನಲ್ಲಿ ಕಂಪೆನಿಯ ಪೋಸ್ಟ್‌ಗಳನ್ನು ಅತಿಹೆಚ್ಚು ಶೇರ್ ಮಾಡಿದವರಿಗೆ ಮನೆಕೆಲಸದ ಮಹಿಳೆಬಹುಮಾನ ಎಂದು ಮಾನವ ಸಂಪನ್ಮೂಲ ಸಂಸ್ಥೆಯೊಂದು ಅರೇಬಿಕ್ ಭಾಷೆಯಲ್ಲಿ ಜಾಹೀರಾತು ನೀಡಿತ್ತು. ಬಹರೈನ್ ಸರಕಾರ ದ ಅಧಿಕಾರಿಗಳು ಜಾಹೀರಾತು ನೀಡಿದ ಸಂಸ್ಥೆಯ ಲೈಸನ್ಸ್ ರದ್ದು ಮಾಡಿದ್ದಾರೆ. ಜಾಹೀರಾತಿನ ಕುರಿತು ವಿವರವಾದ ತನಿಖೆ ನಡೆಸಲಾಗುವುದೆಂದು ಲೇಬರ್ ಮಾರ್ಕೆಟ್ ರೆಗ್ಯುಲೇಟರಿ ಅಥಾರಿಟಿ (ಎಲ್.ಎಂ.ಆರ್. ಎ) ಮುಖ್ಯಾಧಿಕಾರಿ ಸ್ಥಳೀಯ ಪತ್ರಿಕೆಗಳಿಗೆ ತಿಳಿಸಿದ್ದಾರೆ.
ಮನೆಕೆಲಸದವಳನ್ನು ಬಹುಮಾನ ಇರಿಸುವುದ ಎನ್ನುವ ಜಾಹೀರಾತು ಸಾಮಾಜಿಕ ಮಾಧ್ಯಮಗಳನ್ನು ಪರಿಶೀಲಿಸುವ ವೇಳೆ ಕಂಡು ಬಂದಿತ್ತು. ಈ ಸಂಸ್ಥೆಯ ಪೋಸ್ಟ್‌ಗಳನ್ನು ಶೇರ್ ಮಾಡುವವರಿಗೆ ಮನೆಕೆಲಸದವಳನ್ನು ಬಹುಮಾನವಾಗಿ ಘೋಷಿಸಲಾಗಿತ್ತು. ಕೂಡಲೇ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಕ್ರಮ ಜರಗಿಸಿದ್ದಾರೆ. ನ್ಯಾಶನಲ್ ಕಮಿಟಿ ಫಾರ್ ಕೊಂಬಾಟಿಂಗ್, ಟ್ರಾಫಿಕಿಂಗ್ ಇನ್ ಪರ್ಸನ್ಸ್ ಮುಖ್ಯಸ್ಥ ಉಸಾಮ ಅಲ್ಲ ಅಬ್ಸಿ ಕೂಡಲೆ ಸಂಸ್ಥೆಯ ವಿರುದ್ದ ಕ್ರಮಜರಗಿಸಲು ಆದೇಶಿಸಿದ್ದರು. ಮಾನವ ಸಂಪನ್ಮೂಲ ಸಂಸ್ಥೆಯ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿಚಾರಿಸಿದಾಗ ಅವರು ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ. ನಂತರ ಜಾಹೀರಾತಿನ ಪದಗಳನ್ನು ಬದಲಿಸಿದ್ದಾರೆ. ಆದರೆ ಇದ್ಯಾವುದೂ ಮಾನವ ಸಂಪನ್ಮೂಲ ಸಂಸ್ಥೆಯ ಲೈಸನ್ಸ್ ರದ್ದಾಗದಂತೆ ತಡೆದಿಲ್ಲ.







