ಪುಟಾಣಿ ತಂಗಿಯೊಂದಿಗೆ ತಂದೆಯ ವ್ಯಾನ್ ಚಲಾಯಿಸಿಕೊಂಡು ಮೆಕ್ ಡೊನಾಲ್ಡ್ ಗೆ ತೆರಳಿದ 8ರ ಪೋರ
ಚೀಸ್ ಬರ್ಗರ್ ತಿನ್ನುವಾಸೆ

ಒಹಿಯೋ,ಎ.13 : ಚೀಸ್ ಬರ್ಗರ್ ತಿನ್ನಬೇಕೆಂಬ ಆಸೆಯೊಂದಿಗೆ ಎಂಟು ವರ್ಷದ ಬಾಲಕ ತನ್ನ ನಾಲ್ಕು ವರ್ಷದ ಸಹೋದರಿಯೊಂದಿಗೆ ತಂದೆಯ ವ್ಯಾನನ್ನು ಚಲಾಯಿಸಿಕೊಂಡು ಒಂದೂವರೆ ಕಿಮೀ ದೂರದಲ್ಲಿರುವ ಮೆಕ್ ಡೊನಾಲ್ಡ್ ರೆಸ್ಟಾರೆಂಟಿಗೆ ಹೋದ ಆಶ್ಚರ್ಯಕಾರಿ ಘಟನೆ ಅಮೇರಿಕಾದ ಒಹಿಯೋ ನಗರದಿಂದ ವರದಿಯಾಗಿದೆ. ಅಚ್ಚರಿಯೇನೆಂದರೆ ಈ ಪುಟ್ಟ ಬಾಲಕ ವಾಹನ ದಟ್ಟಣೆಯಿರುವ ರಸ್ತೆಗಳಲ್ಲಿ ವಾಹನವನ್ನು ಸುರಕ್ಷಿತವಾಗಿ ಚಲಾಯಿಸಿದ್ದಾನೆ. ಘಟನೆ ನಡೆದಾಗ ಮಕ್ಕಳಿಬ್ಬರ ಹೆತ್ತವರು ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದರು.
ಘಟನೆ ಭಾನುವಾರ ನಡೆದಿದ್ದು ಆ ದಿನ ಬಾಲಕನ ತಂದೆ ದಿನಪೂರ್ತಿ ಕೆಲಸ ಮಾಡಿ ಆಯಾಸಗೊಂಡಿದ್ದರಿಂದ ಬೇಗನೇ ನಿದ್ದೆಗೆ ಜಾರಿದ್ದರು. ಮಕ್ಕಳ ತಾಯಿ ಅವರೊಂದಿಗೇ ಮಲಗಿ ಹಾಗೆಯೇ ನಿದ್ದೆ ಹೋಗಿದ್ದು ಇದೇ ಸಮಯ ಸರಿಯೆಂದು ಮಕ್ಕಳಿಬ್ಬರೂ ಮೆಕ್ ಡೊನಾಲ್ಡ್ ನತ್ತ ಪಯಣ ಬೆಳೆಸಿದ್ದರು. ಮಕ್ಕಳು ವಾಹನ ಚಲಾಯಿಸಿದ್ದನ್ನು ನೋಡಿದ್ದ ಕೆಲ ಜನರು ಆ ಬಾಲಕ ಎಲ್ಲಾ ಟ್ರಾಫಿಕ್ ನಿಯಮಗಳನ್ನು ಪಾಲಿಸಿದ್ದನೆಂದು ಹೇಳಿದ್ದಾರೆ.
ಆದರೆ ರೆಸ್ಟಾರೆಂಟಿನಲ್ಲಿ ಮಕ್ಕಳು ತಮ್ಮ ಫೇವರಿಟ್ ಚೀಸ್ ಬರ್ಗರ್ ಸವಿಯುತ್ತಿದ್ದಾಗ ಅಲ್ಲಿ ಅವರ ಪರಿಚಯದವರೊಬ್ಬರು ಅವರನ್ನು ನೋಡಿ ಅವರ ಮನೆಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸ್ ಸಿಬ್ಬಂದಿ ರೆಸ್ಟಾರೆಂಟಿಗೆ ಆಗಮಿಸುವಷ್ಟರಲ್ಲಿ ಮಕ್ಕಳು ಚೀಸ್ ಬರ್ಗರ್ ತಿಂದು ಮುಗಿಸಿದ್ದರು. ಯೂ ಟ್ಯೂಬ್ ವೀಡಿಯೋಗಳನ್ನು ನೋಡಿ ಡ್ರೈವಿಂಗ್ ಕಲಿತಿದ್ದಾಗಿ ಬಾಲಕ ಪೊಲೀಸರಿಗೆ ಹೇಳಿದ್ದಾನೆ.





