ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಬಿಜೆಪಿ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಎ.13: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದಿನ ಸಾರ್ವತ್ರಿಕ ಚುನಾವಣೆಗೆ ಸೆಮಿಫೈನಲ್ ಎಂದು ಬಿಂಬಿಸಿದ್ದ ಬಿಜೆಪಿ ಮುಗ್ಗರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಉಪ ಚುನಾವಣೆಯನ್ನು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಹಾಗೂ "ಕಾಂಗ್ರೆಸ್ ಮುಕ್ತ ಕರ್ನಾಟಕದ ಸೆಮಿಫೈನಲ್" ಎಂದು ಬಿಜೆಪಿಯವರು ಮಾಡಿದ ಪ್ರಚಾರಕ್ಕೆ ಜನ ಮನ್ನಣೆ ನೀಡಿಲ್ಲ ಎಂದರು.
ಕರ್ನಾಟಕದಲ್ಲಿ ನರೇಂದ್ರಮೋದಿ, ಅಮಿತ್ ಶಾ ಅಲೆ ನಡೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜನರು ಬಿಜೆಪಿಗೆ ನೀಡಿದ್ದಾರೆ. ಇಲ್ಲಿ ಜಾತಿ ಆಧಾರಿತ ರಾಜಕೀಯ ನಡೆಯುವುದಿಲ್ಲ. 2018ರಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿ ಮುಖಂಡರ ಭ್ರಮೆ ಪಂಕ್ಚರ್ ಆಗಿದೆ ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳು ಯಾವುದೆ ವರ್ಗ, ಜಾತಿ, ಧರ್ಮವನ್ನು ಒಡೆದು ರೂಪಿಸಿಲ್ಲ. ಸರ್ವರನ್ನು ಒಳಗೊಂಡ ಬೆಳವಣಿಗೆಯಲ್ಲಿ ನಮ್ಮ ಸರಕಾರ ಹಾಗೂ ಪಕ್ಷ ನಂಬಿಕೆ ಇಟ್ಟುಕೊಂಡಿದೆ. ಜಾತಿಗಳನ್ನು ವರ್ಗೀಕರಣ ಮಾಡಿ, ರಾಜಕಾರಣ ಮಾಡಲು ಪ್ರಯತ್ನ ಪಟ್ಟ ಬಿಜೆಪಿಯವರಿಗೆ ತಕ್ಕ ಪಾಠವನ್ನು ಮತದಾರರು ಕಲಿಸಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಜಾತಿ ಆಧಾರಿತ ರಾಜಕಾರಣದಲ್ಲಿ ನಂಬಿಕೆ ಇಟ್ಟಿಲ್ಲ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ‘ಅಹಿಂದ’ ಎನ್ನುವುದು ಕೆಳಸ್ತರದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವುದು. ಪ್ರಸಕ್ತ ಸಾಲಿನಲ್ಲಿ ಸರಕಾರವು 1.87 ಲಕ್ಷ ಕೋಟಿ ರೂ.ಗಳ ಬಜೆಟ್ ನೀಡಿದೆ. ಒಂದು ವರ್ಷದಲ್ಲಿ ಅದನ್ನು ಸಂಪೂರ್ಣ ಕಾರ್ಯಗತ ಮಾಡುತ್ತೇವೆ. ಯಾವ ಯೋಜನೆಯನ್ನು ಕೈ ಬಿಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಪಕ್ಷವು ಉಪ ಚುನಾವಣೆಗೆ 100 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಶ್ರೀನಿವಾಸ್‌ಪ್ರಸಾದ್ ಮಾಡಿರುವ ಆರೋಪ ಅಪ್ಪಟ ಸುಳ್ಳು. ಶ್ರೀನಿವಾಸ್ ಪ್ರಸಾದ್ ನಮ್ಮ ಪಕ್ಷದಲ್ಲಿದ್ದಾಗ ನಿಯಂತ್ರಣದಲ್ಲಿದ್ದರು. ಆದರೆ, ಬಿಜೆಪಿಗೆ ಹೋಗುತ್ತಿದ್ದಂತೆ ಈ ರೀತಿ ಮಾತುಗಳನ್ನಾಡುತ್ತಿದ್ದಾರೆ. ಹಣ ಕೊಟ್ಟು ನಾನು ಸಚಿವ, ಶಾಸಕನಾದೆ ಎಂದು ವೈಯಕ್ತಿಕ ಟೀಕೆಗಳನ್ನು ಮಾಡಿದರು ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರಕಾರವು ಈ ಚುನಾವಣೆಗೆ ನಾಲ್ವರು ವೀಕ್ಷಕರನ್ನು ಕಳುಹಿಸಿದೆ. ನಾವು 100-200 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೆ, ಚುನಾವಣಾ ಆಯೋಗ ನಿಯಂತ್ರಣ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ ಅವರು, ತಮಿಳುನಾಡಿನಲ್ಲಿ ಹಣ ಹಂಚಿಕೆಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆಯಲ್ಲಿ ರದ್ದುಗೊಳಿಸಲಾಗಿತ್ತು ಎಂದು ಹೇಳಿದರು.
ಜೆಡಿಎಸ್‌ಗೆ ಅಭಿನಂದನೆ: ಈ ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಒಂದು ರಾಜಕೀಯ ಪಕ್ಷವಾಗಿ ಅವರು ಬಹಿರಂಗವಾಗಿ ನಮಗೆ ಬೆಂಬಲ ಘೋಷಿಸಿಲ್ಲ. ಆದರೆ, ಸ್ಥಳೀಯವಾಗಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ನಮಗೆ ಬೆಂಬಲ ನೀಡಿದ್ದಾರೆ. ಅದಕ್ಕಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಪರಮೇಶ್ವರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







