ಅಕ್ರಮ ಮರಳು ಅಡ್ಡೆಗಳ ಮೇಲೆ ಪೊಲೀಸರ ದಾಳಿ: ನಾಲ್ವರ ಬಂಧನ

ಶಿವಮೊಗ್ಗ, ಎ.13: ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕಿನ ಅಕ್ರಮ ಮರಳು ಅಡ್ಡೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಯವರ ಮಾರ್ಗದರ್ಶನ ಹಾಗೂ ಖಚಿತ ವರ್ತಮಾನದ ಮೇರೆಗೆ ಡಿಸಿಐಬಿ ಹಾಗೂ ಡಿಸಿಬಿ ಪೊಲೀಸ್ ತಂಡ ಈ ಜಂಟಿ ಕಾರ್ಯಾಚರಣೆ ನಡೆಸಿದೆ. ದಾಳಿಯ ವೇಳೆ ಸರಿಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಮರಳು ಹಾಗೂ 3 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಆರೋಪಿಗಳ ವಿರುದ್ಧ ಹೊಸನಗರ ಹಾಗೂ ಸಾಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ಕಠಿಣ ಕ್ರಮ: ಕೆಲ ತಿಂಗಳುಗಳ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆಯು ಸರಕಾರದ ಅನುಮತಿಯಿಲ್ಲದೆ ಅಕ್ರಮ ಮರಳು ಸಾಗಾಟ ಹಾಗೂ ನದಿಪಾತ್ರಗಳಿಂದ ಮರಳು ತೆಗೆಯುತ್ತಿದ್ದವರ ವಿರುದ್ಧ ಸಮರ ಸಾರಿತ್ತು. ಜಿಲ್ಲೆಯ ವಿವಿಧೆಡೆ ದಿಡೀರ್ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮರಳು ಪತ್ತೆ ಹಚ್ಚಿ ಹಲವರ ವಿರುದ್ಧ ಕೇಸ್ ದಾಖಲಿಸಿತ್ತು.
ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.







