ಮೋದಿ ಅಲೆ ಕರ್ನಾಟಕದಲ್ಲಿ ನಡೆಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ಕಾಂಗ್ರೆಸ್ ಮುಕ್ತ ಕರ್ನಾಟಕ’ ಬಿಜೆಪಿ ಭ್ರಮೆ
ಬೆಂಗಳೂರು, ಎ.13: ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಭ್ರಮೆಯಲ್ಲಿದ್ದ ಬಿಜೆಪಿ ಮುಖಂಡರಿಗೆ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಿಂದ ಭ್ರಮನಿರಸವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಉತ್ತರಪ್ರದೇಶದ ಫಲಿತಾಂಶ ಬಂದ ನಂತರ, ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನರೇಂದ್ರಮೋದಿಯ ಅಲೆ, ಗಾಳಿ ಬೀಸುತ್ತದೆ ಎಂದು ಹೇಳಿಕೊಂಡು ತಿರುಗುತ್ತಿದ್ದರು. ಆದರೆ, ಕರ್ನಾಟಕವು ಬಸವಣ್ಣ, ಸಂತರು, ಶರಣರು, ದಾಸರು, ಸೂಫಿಗಳ ವಿಚಾರಧಾರೆಯನ್ನು ಹೊಂದಿರುವ ನಾಡು. ಜಾತ್ಯತೀತ ಹಾಗೂ ಬಹುಸಂಸ್ಕೃತಿಯ ನಾಡು. ಇಲ್ಲಿ ನರೇಂದ್ರ ಮೋದಿಯ ಗಾಳಿ, ಅಲೆ ಬೀಸುವುದಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಭ್ರಮೆಯಲ್ಲಿರುವ ಬಿಜೆಪಿಯವರಿಗೆ ಭ್ರಮನಿರಸನವಾಗಿದೆ. ‘ಮಿಷನ್ 150’ ಎಂದು ಹೇಳಿಕೊಳ್ಳುತ್ತಿರುವವರಿಗೆ ಜನ ಮತ ನೀಡಬೇಕಲ್ಲವೇ ಎಂದು ಸಿಎಂ ವ್ಯಂಗ್ಯವಾಡಿದರು.
ಮುಂದಿನ ಚುನಾವಣೆಯನ್ನು ಯಾವುದೆ ಪಕ್ಷದೊಂದಿಗೆ ಹೊಂದಾಣಿಕೆ, ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಎದುರಿಸುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಸದೃಢವಾಗಿದೆ. ಇಲ್ಲದಿದ್ದರೆ, ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಇಷ್ಟೊಂದು ಬೃಹತ್ ಅಂತರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. 2018ರ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಈ ಫಲಿತಾಂಶದಿಂದ ಇಮ್ಮಡಿಯಾಗಿದೆ ಎಂದು ಅವರು ತಿಳಿಸಿದರು.
ಈ ಚುನಾವಣೆಯು ಜಾತ್ಯತೀತ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ಪಕ್ಷದ ನಡುವಿನ ಹೋರಾಟ. ಮತದಾರರು ಪ್ರಬುದ್ಧರಾಗಿದ್ದಾರೆ. ಜಾತಿ, ಧರ್ಮ ಎಲ್ಲವನ್ನೂ ಮೀರಿ ಬೆಳೆದಿದ್ದಾರೆ. ಆದರೆ, ಯಡಿಯೂರಪ್ಪ ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳಿ, ಜನರಲ್ಲಿ ದ್ವೇಷದ ಭಾವನೆ ಬಿತ್ತಲು ಪ್ರಯತ್ನಿಸಿದರು. ಎಲ್ಲ ಜಾತಿ, ಧರ್ಮದವರು ನಮಗೆ ಮತ ನೀಡಿದ್ದರಿಂದ ಬೃಹತ್ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಹೇಳಿದರು.
ನಾಲ್ಕು ವರ್ಷಗಳ ಕಾಲ ನಿಮ್ಮ ಸೇವೆ ಮಾಡಿದ್ದೇವೆ. ನಮಗೆ ಕೂಲಿ ಕೊಡಿ ಎಂದು ಚುನಾವಣಾ ಪ್ರಚಾರದಲ್ಲಿ ಕೇಳಿಕೊಂಡಿದ್ದೆ. ಜನರು ನಮ್ಮ ಕೆಲಸಗಳನ್ನು ಮೆಚ್ಚಿ ಆಶೀರ್ವಾದ ಮಾಡಿದ್ದಾರೆ. ನಂಜನಗೂಡಿನಲ್ಲಿ 21 ಸಾವಿರ, ಗುಂಡ್ಲುಪೇಟೆಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಾಲ್ಕು ವರ್ಷಗಳಲ್ಲಿ 5 ಬಜೆಟ್‌ಗಳನ್ನು ಮಂಡಿಸಿದ್ದೇನೆ. ಅದರಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದೇನೆ. ಈ ಚುನಾವಣೆಯ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ. ಆದರೆ, ಜನರ ಮನಸ್ಸು, ಭಾವನೆ, ನಾಡಿಮಿಡಿತ ತಿಳಿಯಲು ಅವಕಾಶವಾಯಿತು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನನ್ನನ್ನು ಏಕವಚನದಲ್ಲಿ ‘ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ’ ಎಂದು ಕರೆದರು. ಆದರೆ, ನಾನು ಅವರ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ಪ್ರಸಾದ್ ವೈಯಕ್ತಿಕವಾಗಿ ಕೆಳಮಟ್ಟಕ್ಕೆ ಇಳಿದು "ಸಿದ್ದರಾಮಯ್ಯನ ದುರಂಹಕಾರ ಹಾಗೂ ನನ್ನ ಸ್ವಾಭಿಮಾನದ ನಡುವಿನ ಹೋರಾಟ" ಎಂದು ಹೇಳಿಕೊಂಡರು. ಆದರೆ, ವೈಯಕ್ತಿಕ ಟೀಕೆಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.