ಯಮುನಾ ತಟದಲ್ಲಿ ಮತ್ತೆ ಸಾಂಸ್ಕೃತಿಕ ಉತ್ಸವ ನಡೆಸಿ: ರವಿಶಂಕರ್ ಗುರೂಜಿಗೆ ದಿಲ್ಲಿ ಸಚಿವರ ಆಹ್ವಾನ

ಹೊಸದಿಲ್ಲಿ, ಎ.13: ‘ಆರ್ಟ್ ಆಫ್ ಲಿವಿಂಗ್’ನ ಸ್ಥಾಪಕ ರವಿಶಂಕರ್ ಗುರೂಜಿ ಕಳೆದ ವರ್ಷ ಯಮುನಾ ನದಿ ತಟದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಮಧ್ಯೆ ಮತ್ತೊಮ್ಮೆ ಯಮುನಾ ನದಿ ತಟದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುವಂತೆ ದಿಲ್ಲಿ ಸರಕಾರದ ಜಲ ಇಲಾಖೆಯ ಸಚಿವ ಕಪಿಲ್ ಮಿಶ್ರ ಆಹ್ವಾನ ನೀಡಿದ್ದಾರೆ.
ಕಳೆದ ಬಾರಿ ನಡೆದಿದ್ದ ಸಾಂಸ್ಕೃತಿಕ ಉತ್ಸವದಿಂದ ಯಮುನಾ ನದಿಪಾತ್ರಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು 10 ವರ್ಷಗಳ ಕಾಲಾವಧಿ ಮತ್ತು ಸುಮಾರು 42 ಕೋಟಿ ರೂ. ಅಗತ್ಯವಿದೆ ಎಂದು ತಜ್ಞರು ವರದಿ ನೀಡಿದ್ದರು. ಈ ವರದಿಯ ಬಗ್ಗೆ ಕೇಳಿದಾಗ ನಕ್ಕುಬಿಟ್ಟ ಸಚಿವ ಮಿಶ್ರ, ನದಿಯನ್ನು ಸ್ಪರ್ಶಿಸದೆ ಇದ್ದರೆ ಅದು ಶುದ್ಧಗೊಳ್ಳುತ್ತದೆ ಎಂದರೆ ಯಾರು ನಂಬುತ್ತಾರೆ. ಜನತೆ ಮತ್ತು ಸಮಾಜ ನದಿಗಳೊಂದಿಗೆ ಸಂಪರ್ಕ ಹೊಂದಿದ್ದರೆ, ಜಾತ್ರೆ, ಉತ್ಸವಗಳನ್ನು ನದಿ ತಟದಲ್ಲಿ ಆಯೋಜಿಸಿದರೆ ನದಿಗಳು ಶುದ್ಧಗೊಳ್ಳುತ್ತವೆ ಮತ್ತು ನಿಷ್ಕಳಂಕವಾಗಿರುತ್ತವೆ ಎಂಬುದನ್ನು ಇತಿಹಾಸದ ಪುಟಗಳಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಗುರೂಜಿಯವರ ಸಾಂಸ್ಕೃತಿಕ ಉತ್ಸವ ನಡೆಸಲು ಯಮುನಾ ನದಿ ತಟ ಪ್ರಶಸ್ತ ಸ್ಥಳ ಮತ್ತು ಇಲ್ಲಿ ಆಗಿಂದಾಗ್ಗೆ ಇಂತಹ ಉತ್ಸವ ನಡೆಯುತ್ತಿರಬೇಕು ಎಂದು ಕಪಿಲ್ ಮಿಶ್ರ ಹೇಳಿದರು.
ಕಳೆದ ವರ್ಷ ನಡೆದ ಸಾಂಸ್ಕೃತಿಕ ಉತ್ಸವದಿಂದ ಪರಿಸರಕ್ಕೆ ಮತ್ತು ನದೀಪಾತ್ರಕ್ಕೆ ಆಗಿರುವ ಹಾನಿಯ ಬಗ್ಗೆ ತಜ್ಞರ ಸಮಿತಿಯೊಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಬುಧವಾರ ವರದಿ ಸಲ್ಲಿಸಿತ್ತು.
ಕಳೆದ ವರ್ಷದ ಮಾರ್ಚ್‌ನಲ್ಲಿ ಯಮುನಾ ನದಿ ತಟದಲ್ಲಿ ನಡೆದಿದ್ದ ಸಾಂಸ್ಕೃತಿಕ ಉತ್ಸವವು ನದೀಪಾತ್ರಕ್ಕೆ ಕೇವಲ ಹಾನಿ ಎಸಗಿದ್ದಷ್ಟೇ ಅಲ್ಲ, ಅದನ್ನು ಸಂಪೂರ್ಣ ನಾಶಗೊಳಿಸಿದೆ ಎಂದು ವರದಿಯಲ್ಲಿ ಹೇಳಿದೆ ಎನ್ನಲಾಗಿದೆ. ಈ ವರದಿಯನ್ನು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನಿರಾಕರಿಸಿದೆ. ಈ ವರದಿಯ ಹಿಂದೆ ಷಡ್ಯಂತ್ರ ಅಡಗಿದೆ ಎಂದು ‘ಆರ್ಟ್ ಆಫ್ ಲಿವಿಂಗ್’ ದೂರಿದೆ. ನಾವು ಷಡ್ಯಂತ್ರದ ಬಲಿಪಶುಗಳಾಗಿದ್ದೇವೆ. ಸತ್ಯ ಹೊರಬರುವವರೆಗೂ ನಮ್ಮ ಹೋರಾಟ ನಿಲ್ಲದು. ನಾವು ಪರಿಸರಕ್ಕೆ ಯಾವುದೇ ಹಾನಿ ಎಸಗಿಲ್ಲ. ಬದಲಾಗಿ ಕಳೆದ ಹಲವಾರು ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಪೂರಕವಾದ ಸಾಕಷ್ಟು ಕಾರ್ಯಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದು ಪ್ರತಿಷ್ಠಾನ ತಿಳಿಸಿದೆ.