ಮಾಹಿತಿ ಬಹಿರಂಗಕ್ಕೆ ವಿಫಲ: 2000 ಶಾಲೆಗಳಿಗೆ ನೋಟಿಸ್ ನೀಡಿದ ಸಿಬಿಎಸ್‌ಇ
.cms_.jpeg)
ಹೊಸದಿಲ್ಲಿ, ಎ.13: ಕೆಲವೊಂದು ಮಾಹಿತಿಗಳನ್ನು ಬಹಿರಂಗಗೊಳಿಸಲು ವಿಫಲವಾದ 2000ಕ್ಕೂ ಹೆಚ್ಚಿನ ಶಾಲೆಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಸಿಬಿಎಸ್‌ಸಿಗೆ ಸಂಯೋಜನೆಗೊಂಡಿರುವ ಶಾಲೆಗಳು ತಮ್ಮಲ್ಲಿರುವ ನೀರಿನ ನಳ್ಳಿಗಳು, ವೈ-ಫೈ ವ್ಯವಸ್ಥೆ, ಪ್ರತೀ ತರಗತಿಯಿಂದ ಸಂಗ್ರಹಗೊಂಡಿರುವ ಶುಲ್ಕದ ತಿಂಗಳುವಾರು ವಿವರ, ಶಾಲೆಗೆ ಸೇರ್ಪಡೆ, ಫಲಿತಾಂಶ, ಕಾಯ್ದಿರಿಸಿದ ನಿಧಿ, ಬ್ಯಾಲೆನ್ಸ್ ಶೀಟ್... ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂಬ ನಿಯಮವಿದೆ.
ಬೋರ್ಡ್‌ನ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್‌ನ ಮೂಲಕ ಈ ಮಾಹಿತಿಗಳನ್ನು ಭರ್ತಿ ಮಾಡಿ ಕಳಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಆದರೆ 2000ಕ್ಕೂ ಹೆಚ್ಚಿನ ಶಾಲೆಗಳು ಈ ಆದೇಶವನ್ನು ಉಲ್ಲಂಘಿಸಿದೆ. ಈ ಶಾಲೆಗಳಿಗೆ ನೋಟಿಸ್ ಕಳಿಸಲಾಗಿದೆ. ಇನ್ನೊಂದು ಅವಕಾಶ ನೀಡಲಾಗುವುದು. ಆಗಲೂ ತಪ್ಪಿದರೆ ಪ್ರತೀ ಶಾಲೆಗೂ 50000 ರೂ. ದಂಡ ವಿಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಅಲ್ಲದೆ ಶುಲ್ಕ ಸ್ವರೂಪದ ಬಗ್ಗೆ ನಿಗದಿತ ನಮೂನೆಯನ್ನು ಪಾಲಿಸಬೇಕು. ವಸೂಲಿ ಮಾಡಿದ ಶುಲ್ಕಕ್ಕೆ ಅನುಗುಣವಾಗಿ ಶಾಲೆಯಲ್ಲಿ ಸವಲತ್ತುಗಳನ್ನೂ ಒದಗಿಸಬೇಕು. ಇದಕ್ಕೆ ತಪ್ಪಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.