ಯುನೈಟೆಡ್ ಏರ್‌ಲೈನ್ಸ್ ವಿರುದ್ಧ ಕೋರ್ಟ್‌ಗೆ ಹೋದ ಸಂತ್ರಸ್ತ
ನ್ಯೂಯಾರ್ಕ್, ಎ. 13: ತನ್ನನ್ನು ವಿಮಾನದಿಂದ ಎಳೆದು ಹೊರಹಾಕಿದ ಘಟನೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಇತರ ಪುರಾವೆಗಳನ್ನು ಸಂರಕ್ಷಿಸಿ ಇಡುವಂತೆ ಯುನೈಟೆಡ್ ಏರ್‌ಲೈನ್ಸ್‌ಗೆ ಸೂಚನೆ ನೀಡುವಂತೆ ಕೋರಿ ಸಂತ್ರಸ್ತ ಪ್ರಯಾಣಿಕನು ಇಲಿನಾಯಿಸ್ ರಾಜ್ಯದ ನ್ಯಾಯಾಲಯವೊಂದರಲ್ಲಿ ಬುಧವಾರ ತುರ್ತು ಮನವಿಯೊಂದನ್ನು ಸಲ್ಲಿಸಿದ್ದಾರೆ.
ತಮ್ಮ ಕಕ್ಷಿದಾರ ಡಾ. ಡೇವಿಡ್ ಡಾವೊ ವಿರುದ್ಧ ಏರ್‌ಲೈನ್ಸ್ ಮತ್ತು ಶಿಕಾಗೊ ನಗರ ಪೂರ್ವಾಗ್ರಹಪೀಡಿತವಾಗಿ ವರ್ತಿಸುವ ಅಪಾಯವಿದೆ ಎಂಬುದಾಗಿ ಡಾವೊ ಅವರ ವಕೀಲರು ಅರ್ಜಿಯಲ್ಲಿ ವಾದಿಸಿದ್ದಾರೆ.ಶಿಕಾಗೊ ನಗರವು ಘಟನೆ ನಡೆದ ಒ’ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಡೆಸುತ್ತಿದೆ.
ಯುನೈಟೆಡ್ 3411 ವಿಮಾನಕ್ಕೆ ಸಂಬಂಧಿಸಿದ ನಿಗಾ ವೀಡಿಯೊಗಳು, ಕಾಕ್‌ಪಿಟ್ ಧ್ವನಿ ಮುದ್ರಿಕೆಗಳು, ಪ್ರಯಾಣಿಕ ಮತ್ತು ಸಿಬ್ಬಂದಿ ಪಟ್ಟಿಗಳು ಮತ್ತು ಇತರ ಮಾಹಿತಿಗಳನ್ನು ಸಂರಕ್ಷಿಸಿಡಬೇಕೆಂದು ಅವರು ಕೋರಿದ್ದಾರೆ.
ಎಪ್ರಿಲ್ 9ರ ಘಟನೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಶಿಕಾಗೊ ವಾಯುಯಾನ ಇಲಾಖೆ ಬುಧವಾರ ತಿಳಿಸಿದೆ
ಶಿಕಾಗೊ ವಿಮಾನ ನಿಲ್ದಾಣದಿಂದ ಕೆಂಟಕಿ ರಾಜ್ಯದ ಲೂಯಿಸ್‌ವಿಲ್‌ಗೆ ಹಾರಲಿದ್ದ ವಿಮಾನದಿಂದ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಡಾವೊ ಅವರನ್ನು ನೆಲದ ಮೇಲೆ ದರದರನೆ ಎಳೆದುಕೊಂಡು ಹೋಗಿ ಹೊರದಬ್ಬಿದ್ದರು.
ವಿಮಾನದ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಟಿಕೆಟ್ ಕೊಟ್ಟಿದ್ದು, ಸಿಬ್ಬಂದಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಏರ್‌ಲೈನ್ಸ್ ಹೇಳಿಕೊಂಡಿದೆ.