406.08 ಕೋಟಿ ವೆಚ್ಚದ 3,839 ಕಾಮಗಾರಿಗಳು ಪೂರ್ಣ: ಪ್ರಮೋದ್

ಉಡುಪಿ, ಎ.13: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2013-14ನೆ ಸಾಲಿನಲ್ಲಿ ಮಂಜೂರಾಗಿರುವ ಒಟ್ಟು 575.63 ಕೋಟಿ ರೂ. ವೆಚ್ಚದ 4,421 ಕಾಮಗಾರಿಗಳಲ್ಲಿ 406.08 ಕೋಟಿ ರೂ. ವೆಚ್ಚದ 3,839 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಇಂಜಿನಿಯರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
109.59 ಕೋಟಿ ರೂ. ವೆಚ್ಚದ 422 ಕಾಮಗಾರಿಗಳು ಪ್ರಗತಿಯಲ್ಲಿದ್ದು, 59.96 ಕೋಟಿ ರೂ. ವೆಚ್ಚದ 160 ಕಾಮಗಾರಿಗಳು ಆರಂಭಕ್ಕೆ ಬಾಕಿ ಇವೆ. ಕ್ಷೇತ್ರದಲ್ಲಿ 16 ಕಿಂಡಿ ಅಣೆಕಟ್ಟು ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಈ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ತಿಳಿಸಿದರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಾಹಿತಿ ನೀಡಿ, 242 ಕಾಮಗಾರಿಗಳಲ್ಲಿ 214 ಕಾಮಗಾರಿಗಳು ಪೂರ್ಣ ಗೊಂಡಿದ್ದು, 26 ಪ್ರಗತಿಯಲ್ಲಿದೆ ಎಂದರು.
ಗ್ರಾಮೀಣ ಪ್ರದೇಶದ ರಸ್ತೆಗಳಿಗೆ 10 ಕೋಟಿ ರೂ. ವಿಶೇಷ ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದು ಸಚಿವರು ತಿಳಿಸಿದರು. ಲೋಕೋಪಯೋಗಿ ಇಲಾಖೆಯ 90 ಕೋಟಿ ವೆಚ್ಚದ 132 ಕಾಮಗಾರಿಗಳಲ್ಲಿ 125 ಪೂರ್ಣವಾಗಿದ್ದು, 5 ಪ್ರಗತಿಯಲ್ಲಿದೆ ಎಂದು ಇಂಜಿನಿಯರ್ ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಮುಖ್ಯ ಇಂಜಿನಿಯರ್‌ಗಳಾದ ಚಂದ್ರ ಶೇಖರ್, ದಯಾನಂದ, ಕೃಷ್ಣ ಹೆಬ್ಸೂರು, ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.





