ಉಪಚುನಾವಣೆ ಗೆಲುವು: ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ನಾಳೆ ಹೊಸದಿಲ್ಲಿಗೆ

ಬೆಂಗಳೂರು, ಎ.13: ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಹೊಸದಿಲ್ಲಿಗೆ ಬರುವಂತೆ ಸೂಚನೆ ನೀಡಿದ್ದು, ನಾಳೆ(ಎ.14) ಸಂಜೆ ಮೂರು ಮಂದಿ ನಾಯಕರು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ.
ಭರ್ತಿಗೆ ಚರ್ಚೆ: ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಸಂಬಂಧಪಟ್ಟ ವರಿಷ್ಠರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಮುಂದುವರಿಸುವ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.
ಎ.14ರಂದು ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ‘ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಶಂಕುಸ್ಥಾಪನೆ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳಲಿದ್ದಾರೆ. ಆ ನಂತರ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಸಂಜೆ ವಿಶೇಷ ವಿಮಾನದಲ್ಲಿ ಹೊಸದಿಲ್ಲಿಗೆ ಪ್ರಯಾಣಿಸಲಿದ್ದಾರೆಂದು ತಿಳಿದು ಬಂದಿದೆ.







