ಸರಣಿಶ್ರೇಷ್ಠ ಪ್ರಶಸ್ತಿ ಸಾನಿಯಾಗೆ ಅರ್ಪಿಸಿದ ಶುಐಬ್ ಮಲಿಕ್

ಕರಾಚಿ, ಎ.13: ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್ ಇತ್ತೀಚೆಗೆ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ತನ್ನ ಭರ್ಜರಿ ಪ್ರದರ್ಶನಕ್ಕೆ ತನ್ನ ಪತ್ನಿಯೇ ಸ್ಫೂರ್ತಿ ಎಂದು ಹೇಳಿದ್ದರು. ಇದೀಗ ಪಾಕ್ ಆಲ್‌ರೌಂಡರ್ ಶುಐಬ್ ಮಲಿಕ್ ಅವರು ತನ್ನ ಕ್ರಿಕೆಟ್ ವೃತ್ತಿಜೀವನವನ್ನು ರೂಪಿಸಲು ಪತ್ನಿ ಸಾನಿಯಾ ಮಿರ್ಝಾ ಕೊಡುಗೆ ನೀಡಿದ್ದಾರೆಂದು ಶ್ಲಾಘಿಸಿದ್ದಾರೆ.
ಶುಐಬ್-ಸಾನಿಯಾ ದಂಪತಿ 2010ರಲ್ಲಿ ವಿವಾಹವಾಗಿದ್ದು, ಬುಧವಾರ ವೈವಾಹಿಕ ಜೀವನದಲ್ಲಿ ಏಳನೆ ವರ್ಷ ಪೂರೈಸಿದರು.
ಶುಐಬ್ ಮಲಿಕ್ ಇತ್ತೀಚೆಗೆ ವೆಸ್ಟ್‌ಇಂಡೀಸ್ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕ್ ತಂಡ 2-1ಅಂತರದಿಂದ ಸರಣಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದು, ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದರು.
‘‘ಸಾನಿಯಾಗೆ ವೈವಾಹಿಕ ಜೀವನದ ಶುಭಾಶಯಗಳು, ನನ್ನಲ್ಲಿ ಕನಸುಗಳನ್ನು ಬಿತ್ತಿರುವ ಸಾನಿಯಾಗೆ ಈ ನನ್ನ ಪ್ರಶಸ್ತಿ ಸಮರ್ಪಿಸುವೆ. ಇದೀಗ ನಾವು ಏಳನೆ ವರ್ಷದ ವೈವಾಹಿಕ ಜೀವನವನ್ನು ಆಚರಿಸಿಕೊಳ್ಳುತ್ತಿದ್ದೇವೆ’’ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ.





