ಕೋಮು ಸಂಘರ್ಷಗಳನ್ನು ನಡೆಸುವವರ ವಿರುದ್ಧ ಸಮರ ಸಾರುವುದೇ ಸೌಹಾರ್ದತೆ: ಶಾಫಿ ಸಅದಿ
ಮೊಗರ್ಪಣೆ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಮಖಾಂ ಉರೂಸ್

ಸುಳ್ಯ, ಎ.13: ಮನಸ್ಸು ಮನಸ್ಸುಗಳನ್ನು ಗೆಲ್ಲಬೇಕು. ಮನುಷ್ಯರ ನಡುವೆ ಪ್ರೀತಿ, ಸ್ನೇಹ, ವಿಶ್ವಾಸದ ಸೇತುವೆ ನಿರ್ಮಾಣವಾದಲ್ಲಿ ಮಾತ್ರ ಸುಂದರ ಭಾರತದ ಕನಸು ಕಾಣಲು ಸಾಧ್ಯ ಎಂದು ಬೆಂಗಳೂರು ಸಅದಿ ಫೌಂಡೇಶನ್ ಅಧ್ಯಕ್ಷ ಶಾಫಿ ಸಅದಿ ಹೇಳಿದರು.
ಮೊಗರ್ಪಣೆ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಮಖಾಂ ಉರೂಸ್ ಅಂಗವಾಗಿ ನಡೆದ ಸೌಹಾರ್ದ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಧರ್ಮದ ವಿದ್ವಾಂಸರು, ಧರ್ಮ ಗ್ರಂಥಗಳು ಹಿಂಸೆಯನ್ನು ಪ್ರಚೋದಿಸುವುದಿಲ್ಲ. ನೈಜ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧರ್ಮದವರು ಕೋಮು ವಿಷಬೀಜಗಳನ್ನು ಬಿತ್ತುವುದಿಲ್ಲ. ಕೋಮು ಸಂಘರ್ಷಗಳನ್ನು ನಡೆಸುವವರ ವಿರುದ್ಧ ಸಮರ ಸಾರುವುದೇ ನಿಜವಾದ ಸೌಹಾರ್ದತೆಯಾಗಿದೆ ಎಂದು ಅವರು ಹೇಳಿದರು.
ಸುಳ್ಯ ಬೀರಮಂಗಿಲ ಚರ್ಚ್‌ನ ಧರ್ಮಗುರು ಫಾ. ವಿನ್ಸೆಂಟ್ ಡಿಸೋಜ ಮಾತನಾಡಿ, ಸರ್ವಧರ್ಮೀಯರು ಜೊತೆಯಾಗಿ ದುಡಿಯುವುದರಿಂದ ಅದ್ಭುತಗಳು ನಡೆಯುತ್ತದೆ. ದೇವಾಲಯ, ಮಸೀದಿ, ಚರ್ಚ್‌ಗಳು ಸಾಮಾನ್ಯ ಜನರಿಗೆ ಬೇಕಾದ ವಿದ್ಯಾಭ್ಯಾಸ, ಪ್ರೀತಿ, ಪರಸ್ಪರ ವಿಶ್ವಾಸದಂತಹ ಬೇಡಿಕೆಗಳಿಗೆ ಸ್ಪಂದಿಸಬೇಕು. ಹಾಗಾದಲ್ಲಿ ಮಾತ್ರ ಸೌಹಾರ್ದ ಉಳಿದುಯುತ್ತದೆ ಎಂದು ಹೇಳಿದರು.
ಮೈಸೂರು ಪ್ರಾಂತ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಸ್. ಮುಹಮ್ಮದ್ ಮಾತನಾಡಿ, ಸೌಹಾರ್ದ ಸಭೆ ಸಮಾರಂಭಗಳು ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ. ಭಾರತ ದೇಶದಲ್ಲಿ ಎಲ್ಲಾ ಧರ್ಮೀಯರೂ ಸಮಾನವಾಗಿ ಜೀವಿಸುವ ಅವಕಾಶವಿದ್ದು, ಸೌಹಾರ್ದ ಕಾಪಾಡಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದು ಹೇಳಿದರು.
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಜಗತ್ತು ಹತ್ತಿರವಾಗುತ್ತಿದ್ದಂತೆ ಮನುಷ್ಯ ಮನಸ್ಸುಗಳು ದೂರವಾಗುತ್ತಿದೆ. ಪರಸ್ಪರ ಧರ್ಮಗಳು ಬೆರೆದಾಗ ಸೌಹಾರ್ದ ಸಮ್ಮೇಳನಗಳು ಯಶಸ್ವಿಯಾಗುವುದು. ಧರ್ಮಗಳ ನಡುವೆ ಪ್ರೀತಿ ವಿಶ್ವಾಸ ಹುಟ್ಟಬೇಕು. ಇದಕ್ಕಾಗಿ ಎಲ್ಲಾ ಧರ್ಮೀಯರು ಒಟ್ಟುಗೂಡಿ ಸರ್ವಧರ್ಮ ಸಮ್ಮೇಳನಗಳನ್ನು ನಡೆಸಬೇಕು ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಫಾರ್ಮಡ್ ಗ್ರೂಪ್‌ನ ಉಮ್ಮರ್ ಬೀಜದಕಟ್ಟೆ ಹಾಗೂ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಗಳಿಸಿದ ಸುಹೈಲ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಮೊಗರ್ಪಣೆ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೊಗರ್ಪಣೆ ಮಸೀದಿ ಅಧ್ಯಕ್ಷ ಅಬ್ದುಸಮದ್ ಹಾಜಿ, ಉರೂಸ್ ಕಮಿಟಿ ಅಧ್ಯಕ್ಷ ಎಚ್.ಎ ಉಮ್ಮರ್, ಮಸೀದಿ ಮಾಜಿ ಅಧ್ಯಕ್ಷ ರಶೀದ್ ಕಮ್ಮಾಡಿ, ಮಸೀದಿ ಖತೀಬರಾದ ಅಬ್ದುಲ್ ರವೂಫ್ ಸಖಾಫಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಮಾಜಿ ನಪಂ ಅಧ್ಯಕ್ಷ ಎಸ್.ಶಂಸುದ್ದೀನ್, ಮೂಸಾಕುಂಞಿ ಪೈಂಬಚ್ಚಾಲ್ ಮತ್ತಿತರರು ಉಪಸ್ಥಿತರಿದ್ದರು.







