ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತರಿಂದ ಪವಿತ್ರ ಗುರುವಾರ ಆಚರಣೆ

ಉಡುಪಿ,ಎ.13: ಏಸುಕ್ರಿಸ್ತರು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೈಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರ(ಮೊಂಡಿ ಥಸ್‌ಡೇ)ವನ್ನು ಜಿಲ್ಲೆಯಾದ್ಯಂತ ಕ್ರೈಸ್ತರು ಭಕ್ತಿಯಿಂದ ಆಚರಿಸಿದರು.
ಧರ್ಮಪ್ರಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮವು ಗುರುವಾರ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ನಡೆಯಿತು.ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ಸಾರಿದರು.
ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ 5 ಮಂದಿ ಮಹಿಳಾ ಪ್ರತಿನಿಧಿಗಳು ಹಾಗೂ 7 ಮಂದಿ ಪುರುಷ ವಿಶ್ವಾಸಿಗಳ ಪಾದ ತೊಳೆಯಲಾಯಿತು.
ಪವಿತ್ರ ಗುರುವಾರದ ಅಂಗವಾಗಿ ಚರ್ಚುಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರುದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ಜರಗಿದವು. ಶುಕ್ರವಾರ ದಿನದಂದು ಕ್ರೈಸ್ತರು ಶುಭಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ನೆರವೇರಿಸುವುದರ ಮೂಲಕ ಆಚರಿಸುತ್ತಾರೆ.





