ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ‘ಬಿಸು ಕೂಟ’

ಮಂಗಳೂರು, ಎ.13: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ವಿಷು ಸಂಕ್ರಮಣದ ಪ್ರಯುಕ್ತ ‘ಬಿಸು ಕೂಟ’ ಕಾರ್ಯಕ್ರಮವನ್ನು ನಗರದ ಕುಡ್ಲಾ ಪೆವಿಲಿಯನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಾವು, ಗೇರು, ಹಲಸು, ನೇರಳೆ ಸೇರಿದಂತೆ ವಿವಿಧ ತರಕಾರಿಗಳನ್ನು ಕನ್ನಡಿ ಮತ್ತು ದೀಪದೊಂದಿಗೆ ಬಿಸು ಕಣಿಯ ಪ್ರಯುಕ್ತ ಜೋಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾಪಕಾಧ್ಯಕ್ಷ ಸದಾನಂದ ಶೆಟ್ಟಿ ವಹಿಸಿದ್ದರು.ಮಾಜಿ ಸಚಿವ ಅಮರನಾಥ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿದರು.
ಶ್ರೀ ದೇವಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಮೈನಾವತಿ ಎಸ್.ಶೆಟ್ಟಿ ನೇತೃತ್ವದಲ್ಲಿ ಬಿಸುಕಣಿಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ರಾಜಗೋಪಾಲ ರೈ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಸಂಚಿಕೆ "ಸದಾಶಯ"ವನ್ನು ಎಚ್.ಆರ್.ಶೆಟ್ಟಿ ಬಿಡುಗಡೆಗೊಳಿಸಿದರು .ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಮುಂಬಯಿಯ ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ್ ಶೆಟ್ಟಿ ತೋನ್ಸೆ ಬಿಸು ಹಬ್ಬದ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ವಿಜಯಲಕ್ಷ್ಮೀ ಶೆಟ್ಟಿ,ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ,ರೋಹಿತ್ ಕುಮಾರ್ ಕಟೀಲ್, ದೇವಿಚರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





