ಮರಳು ಮಾಫಿಯಾದ ವಿರುದ್ಧ ಕಠಿಣ ಕ್ರಮ: ಐಜಿಪಿ

ಕುಂದಾಪುರ, ಎ.13: ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 23 ಮಂದಿಯನ್ನು ಬಂಧಿಸಲಾಗಿದ್ದು, ಮರಳು ಮಾಫಿಯಾ ದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಆರೋಪಿಗಳನ್ನು ವಾರದೊಳಗೆ ಬಂಧಿಸ ಲಾಗುವುದು ಎಂದು ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರ್ದೇಶಕ ಹರಿಶೇಖರನ್ ಹೇಳಿದ್ದಾರೆ.
ಕುಂದಾಪುರದ ಕಂಡ್ಲೂರು ಹಾಗೂ ಹಳ್ನಾಡು ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದ್ದು, ಮರಳು ದಂಧೆಯಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳು ತೊಡಗಿಸಿಕೊಂಡಿದ್ದರೂ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಅಕ್ರಮ ಮರಳು ಚಟುವಟಿಕೆಗಳಿಗೆ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಮರಳುಗಾರಿಕೆ ವಿಚಾರ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಬಂಧಿಸಿದ್ದಾಗಿದೆ. ಇದು ಅವರ ಹೊಣೆಯಾಗಿದೆ. ಅದು ಬಿಟ್ಟು ಪೊಲೀಸರನ್ನು ದೂರುವುದನ್ನು ತಾನು ಒಪ್ಪುವುದಿಲ್ಲ ಎಂದು ಅವರು ಹೇಳಿದರು. ಮಂಗಳೂರು- ಕಾರವಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿದಿನ 25ಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇದನ್ನು ತಡೆಯಲು ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ಈ ಮೂಲಕ ಅಪಘಾತಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ಗಾಂಜಾ ಮಾರಾಟ ಮಾಡುವ ಮೂಲವನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು. ನಾನು ಅಧಿಕಾರ ಸ್ವೀಕರಿಸಿ ಮೂರು ತಿಂಗಳಾಗಿದ್ದು, ಇಲ್ಲಿನ ಎಲ್ಲ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ. ಮುಂದೆ ಇದರ ಬಗ್ಗೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಐಜಿಪಿ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ದನ್, ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಅಮಾಯಕರ ಬಿಡುಗಡೆಗೆ ಮನವಿ: ಡಿಸಿ ಕೊಲೆಯತ್ನ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಪೋಷಕರು ಕಂಡ್ಲೂರು ಪ್ರದೇಶಕ್ಕೆ ಭೇಟಿ ನೀಡಿದ ಮಂಗಳೂರು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರಿಗೆ ಮನವಿ ಸಲ್ಲಿಸಿದರು. ‘ಅಮಾಯಕ ಯುವಕರನ್ನು ಬಂಧಿಸಲಾಗಿದೆ. ವಿದೇಶದಿಂದ ರಜೆಯಲ್ಲಿ ಊರಿಗೆ ಬಂದ ನಮ್ಮ ಮಕ್ಕಳನ್ನು ಕೂಡ ಬಂಧಿಸಲಾಗಿದೆ. ನಿಜವಾದ ಆರೋಪಿ ಗಳನ್ನು ಪತ್ತೆ ಹಚ್ಚಿ ಬಂಧಿಸಿ ಶಿಕ್ಷೆ ಕೊಡಿ. ಆದರೆ ಅಮಾಯಕರನ್ನು ಬಿಡುಗಡೆ ಮಾಡಿ ಎಂದು ಪೋಷಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.







