ಟೆಸ್ಟ್ ನಿವೃತ್ತಿ ಹಿಂಪಡೆದ ಜೆರೊಮ್ ಟೇಲರ್

ಗಯಾನ, ಎ.13: ಜಮೈಕಾದ ವೇಗದ ಬೌಲರ್ ಜೆರೊಮ್ ಟೇಲರ್ ತನ್ನ ಟೆಸ್ಟ್ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.
ಒಟ್ಟು 46 ಟೆಸ್ಟ್ ಪಂದ್ಯಗಳನ್ನು ಆಡಿದ್ದ 32ರ ಹರೆಯದ ಟೇಲರ್ 2016ರ ಜುಲೈನಲ್ಲಿ ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಳ್ಳುವ ಮೊದಲು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಎ.21 ರಂದು ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೇಲರ್ ವಿಂಡೀಸ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
‘‘ನನ್ನಲ್ಲಿ ಇನ್ನೂ ಕ್ರಿಕೆಟ್ ಬಾಕಿಯಿದೆ ಎಂದು ಭಾವಿಸಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್ ತಂಡಕ್ಕೆ ಇನ್ನಷ್ಟು ಕೊಡುಗೆ ನೀಡುವ ಶಕ್ತಿ ನನಗಿದೆ. ಒಂದು ವೇಳೆ ಟೆಸ್ಟ್ ತಂಡಕ್ಕೆ ಆಯ್ಕೆಯಾದರೆ ತಂಡದ ಗೆಲುವಿಗೆ ಕಾಣಿಕೆ ನೀಡಲು ಶ್ರಮಿಸುವೆ’’ ಎಂದು ಟೇಲರ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಟೇಲರ್ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್‌ಗೆ ಲಭ್ಯವಿದ್ದರೂ ಅವರನ್ನು ವಿಂಡೀಸ್ ಆಯ್ಕೆ ಸಮಿತಿ ಕಡೆಗಣಿಸಿತ್ತು. ಇದೀಗ ಟೇಲರ್ ನಿರ್ಧಾರವನ್ನು ವಿಂಡೀಸ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಕೋರ್ಟ್ನಿ ಬ್ರೌನ್ ಸ್ವಾಗತಿಸಿದ್ದಾರೆ.







