ಸಾಕ್ಷಿ ಮಲಿಕ್, ದೀಪಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ಹೊಸದಿಲ್ಲಿ, ಎ.13: ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್, ಕುಸ್ತಿಪಟು ಸಾಕ್ಷಿ ಮಲಿಕ್, ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಹಾಗೂ ಪ್ಯಾರಾಲಿಂಪಿಯನ್ ಮರಿಯಪ್ಪನ್ ತಂಗವೇಲುವಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರ ರಾಷ್ಟ್ರಪತಿ ಭವನದಲ್ಲಿ ಪದ್ಮ ಶ್ರೀ ಪ್ರಶಸ್ತಿಗಳನ್ನು ಪ್ರದಾನಿಸಿದರು.
ಕಲೆ, ಶಿಕ್ಷಣ, ಉದ್ಯಮ, ಸಾಹಿತ್ಯ, ವಿಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಸೇವೆ ಹಾಗೂ ಸಾರ್ವಜನಿಕ ವ್ಯವಹಾರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾರತದ ನಾಗರಿಕರಿಗೆ ಪದ್ಮ ಪ್ರಶಸ್ತಿಯನ್ನು ನೀಡಲಾಗುತ್ತದೆ.
ರಿಯೋ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಜಿಮ್ನಾಸ್ಟಿಕ್ ತಾರೆ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದ ತ್ರಿಪುರಾ ಮೂಲದ ದೀಪಾ ಕರ್ಮಾಕರ್, ಒಲಿಂಪಿಕ್ಸ್‌ನಲ್ಲಿ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಸಾಕ್ಷಿ ಮಲಿಕ್, ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ಮರಿಯಪ್ಪನ್ ತಂಗವೇಲು ಹಾಗೂ ಅಮೆರಿಕದ ಕನ್ನಡಿಗ ವಿಕಾಸ್ ಗೌಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.







