ಅಹ್ಮದ್ ಖುರೇಷಿ ಉಪಕಾರಾಗೃಹಕ್ಕೆ ಸ್ಥಳಾಂತರ
ಮಂಗಳೂರು, ಎ.13: ಸಿಸಿಬಿ ಪೊಲೀಸ್ ದೌರ್ಜನ್ಯ ಆರೋಪದಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಟಿಪಳ್ಳದ ಅಹ್ಮದ್ ಖುರೇಷಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಗುರುವಾರ ಉಪಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಕಾಟಿಪಳ್ಳ ನಿವಾಸಿ ಪ್ರಕಾಶ್ ಪೂಜಾರಿ ಕೊಲೆಯತ್ನ ಪ್ರಕರಣದಲ್ಲಿ ಖುರೇಷಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅಹ್ಮದ್ ಖುರೇಷಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಕಿಡ್ನಿ ವೈಫಲ್ಯಕ್ಕೀಡಾಗಿತ್ತು. ಇದಕ್ಕೆ ಪೊಲೀಸ್ ದೌರ್ಜನ್ಯವೇ ಕಾರಣ ಎಂದು ಖುರೇಷಿಯ ಕುಟುಂಬಸ್ಥರು ಆರೋಪಿಸಿದ್ದರು.
ಖುರೇಷಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲು ಅವಕಾಶ ಕಲ್ಪಿಸುವಂತೆ ಖುರೇಷಿಯ ಕುಟುಂಬಸ್ಥರು ಮಂಗಳೂರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆಯ ಮೇರೆಗೆ ಅವರನ್ನು ನಗರದ ಕೆ.ಎಂ.ಸಿ. ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ನಾಲ್ಕು ದಿನಗಳ ಚಿಕಿತ್ಸೆ ಪಡೆದಿರುವ ಖುರೇಷಿಯನ್ನು ಇದೀಗ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





