ಖುರೇಷಿಯ ಆಸ್ಪತ್ರೆಯ ಬಿಲ್ ಪಾವತಿಸಿದವರಾರು?: ಪೊಲೀಸರ ನಡೆಯ ಬಗ್ಗೆ ಸಂಶಯ

ಮಂಗಳೂರು, ಎ.13: ಜಿಲ್ಲಾ ನ್ಯಾಯಾಲಯದ ಆದೇಶದಂತೆ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಖುರೇಷಿಯನ್ನು ಪೊಲೀಸರು ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಉಪಕಾರಾಗೃಹಕ್ಕೆ ಸ್ಥಳಾಂತರಿಸಿದ್ದರೂ, ಖುರೇಷಿ ಬಿಡುಗಡೆಗೆ ಆಸ್ಪತ್ರೆಯ ಬಿಲ್ ಪಾವತಿಸಿದವರು ಯಾರು ಎಂಬ ಯಕ್ಷ ಪ್ರಶ್ನೆ ಉದ್ಭವವಾಗಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಸಹೋದರನ ಮೃತದೇಹವನ್ನು ಬಿಲ್ ಪಾವತಿಸದೆ ಕುಟುಂಬಸ್ಥರಿಗೆ ಹಸ್ತಾಂತರಗೊಳಿಸದ ಕೆಎಂಸಿ ಆಸ್ಪತ್ರೆಯವರು ಇದೀಗ ಖುರೇಷಿ ಬಿಡುಗಡೆಗೆ ಬಿಲ್ ಪಡೆಯದಿರಲು ಸಾಧ್ಯವೇ? ಹಾಗಾದರೆ ಆಸ್ಪತ್ರೆಗೆ ಹಣ ಕೊಟ್ಟವರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, "ಅಹ್ಮದ್ ಖುರೇಷಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದರಿಂದ ಜಿಲ್ಲಾ ನ್ಯಾಯಾಲಯದ ಸೂಚನೆಯಂತೆ ಎ.6ರಂದು ನಗರದ ವೆನ್ಲಾಕ್‌ನಿಂದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಚಿಕಿತ್ಸೆಯ ವೆಚ್ಚವನ್ನು ರೋಗಿಯ ಕುಟುಂಬವೇ ನೋಡಿಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿತ್ತು. ಆದರೆ ಇಂದು ಪೊಲೀಸರು ಆತ ಚೇತರಿಸಿಕೊಂಡಿದ್ದಾನೆಂದು ಹೇಳಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಉಪಕಾರಾಗೃಹಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ನಾನು ರೋಗಿಯ ಕುಟುಂಬಸ್ಥರನ್ನು ಕೇಳಿದಾಗ 'ನಾವೇನು ಆಸ್ಪತ್ರೆಯ ಬಿಲ್ ಪಾವತಿಸಿಲ್ಲ' ಎಂದು ಹೇಳಿದ್ದಾರೆ. ಇದೀಗ ಯಾರು ಬಿಲ್ ಪಾವತಿಸಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸರು ಪಾವತಿಸಿದ್ದರೆ, ಪೊಲೀಸರು ಪಾವತಿಸಲು ಕಾರಣಗಳೇನು? ಅವರಿಗೆ ಬಿಲ್ ಪಾವತಿಸಲು ಹಣ ಕೊಟ್ಟವರು ಯಾರು? ಒಂದು ವೇಳೆ ಹೊರಗಿನವರು ಕೊಟ್ಟಿದ್ದರೆ, ಯಾರು ಕೊಟ್ಟಿದ್ದಾರೆ ಮತ್ತು ಯಾಕಾಗಿ ಕೊಟ್ಟಿದ್ದಾರೆ ಎಂಬ ಸಂಶಯಗಳನ್ನು ಹುಟ್ಟು ಹಾಕಿವೆ" ಎನ್ನುತ್ತಾರೆ.
ಕೆಎಂಸಿಗೆ ಬಿಲ್ ಪಾವತಿಸಲಾಗಿಯೇ.. ಇಲ್ಲವೇ ಎಂಬುದು ಗೊತ್ತಾಗಿಲ್ಲ. ಒಂದು ವೇಳೆ ಕೆಎಂಸಿಗೆ ಬಿಲ್ ಪಾವತಿಯಾಗದಿದ್ದರೆ ಅವರು ಹಣ ಪಡೆಯದೆ ಯಾಕೆ ಬಿಡುಗಡೆ ಮಾಡಿದ್ದಾರೆ. ಕೆಎಂಸಿಯವರ ಮೇಲೆ ಪ್ರಭಾವ ಬೀರಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿವೆ. ಒಟ್ಟಾರೆ, ಇಲ್ಲಿ ಪೊಲೀಸರ ನಡೆ ಸಂಶಯಾಸ್ಪದವಾಗಿದೆ ಎನ್ನುತ್ತಾರೆ ಉಳೇಪಾಡಿಯವರು.







