ಕೇರಳ ಕ್ರಿಕೆಟ್ ಸಂಸ್ಥೆಯೊಂದಿಗೆ ವಾಟ್ಮೋರ್ ಒಪ್ಪಂದ

ಕೊಚ್ಚಿ, ಎ.13: ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಝಿಂಬಾಬ್ವೆ ರಾಷ್ಟ್ರೀಯ ತಂಡಗಳ ಮಾಜಿ ಕೋಚ್ ಡೇವ್ ವಾಟ್ಮೋರ್ ಕೇರಳ ಕ್ರಿಕೆಟ್ ಸಂಸ್ಥೆ(ಕೆಸಿಎ)ಯೊಂದಿಗೆ ಆರು ತಿಂಗಳ ಒಪ್ಪಂದಕ್ಕೆ ಸಹಿಹಾಕಿದ್ದಾರೆ.
ವಾಟ್ಮೋರ್ 2017ರ ಸೆಪ್ಟಂಬರ್‌ನಿಂದ ಕೇರಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಕಳೆದ ವಾರ ಈ ಸುದ್ದಿಯನ್ನು ದೃಢಪಡಿಸಿದ್ದ ಕೆಸಿಎ ವಿಶ್ವಕಪ್ ವಿಜೇತ ಕೋಚ್ ವಾಟ್ಮೋರ್ ಮುಂಬರುವ 2017-18ರ ಭಾರತದ ದೇಶೀಯ ಋತುವಿನಲ್ಲಿ ಕೇರಳ ರಾಜ್ಯ ಕ್ರಿಕೆಟ್ ತಂಡದ ಕೋಚ್ ಆಗಲಿದ್ದಾರೆ ಎಂದು ಹೇಳಿತ್ತು.
ಅತ್ಯಂತ ಮುಖ್ಯವಾಗಿ ಸೀನಿಯರ್ ತಂಡಕ್ಕೆ ಕೋಚ್ ನೀಡಲಿರುವ ವಾಟ್ಮೋರ್ ಕೆಸಿಎ ನಡೆಸುವ ವಿವಿಧ ವಯೋಮಿತಿಯ ಕ್ರಿಕೆಟ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೇರಳ ಅಂಡರ್-23 ಕ್ರಿಕೆಟ್ ತಂಡದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
ಇತ್ತೀಚೆಗೆ ವಾಟ್ಮೋರ್ ಚೆನ್ನೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತುಕತೆ ನಡೆದಿತ್ತು. ಪ್ರಸ್ತುತ ವಾಟ್ಮೋರ್ ಅವರು ತನ್ನ ಕ್ರಿಕೆಟ್ ಅಕಾಡಮಿ-ವಾಟ್ಮೋರ್ ಕ್ರಿಕೆಟ್ ಸೆಂಟರ್ ಸಹಯೋಗದಲ್ಲಿ ಚೆನ್ನೈನ ಶ್ರೀರಾಮಚಂದ್ರ ಯುನಿವರ್ಸಿಟಿಯೊಂದಿಗೆ 3 ವರ್ಷ ಒಪ್ಪಂದ ಮಾಡಿಕೊಂಡಿದ್ದಾರೆ.







