ಮಹಿಳೆಯರು ಮದುವೆಯ ಬಳಿಕ ಪಾಸ್‌ಪೋರ್ಟ್‌ನಲ್ಲಿ ಹೆಸರು ಬದಲಿಸುವ ಅಗತ್ಯವಿಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ, ಎ.13: ಮದುವೆಯಾದ ಬಳಿಕ ಮಹಿಳೆಯರು ತಮ್ಮ ಪಾಸ್‌ಪೋರ್ಟ್‌ನಲ್ಲಿ ಹೆಸರು ಬದಲಾಯಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇನ್ನು ಮುಂದೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಮಹಿಳೆಯರು ವಿಚ್ಛೇದನ / ಮದುವೆ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯ ಇರುವುದಿಲ್ಲ. ಪಾಸ್‌ಪೋರ್ಟ್‌ನಲ್ಲಿ ತಂದೆ/ತಾಯಿಯ ಹೆಸರನ್ನು ಸೇರಿಸುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರಧಾನಿ ನುಡಿದರು. ‘ಇಂಡಿಯನ್ ಮರ್ಚಂಟ್ ಚೇಂಬರ್’ನ ಮಹಿಳಾ ವಿಭಾಗದ ಸ್ವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡು ಮಾತನಾಡಿದರು.
ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವಲ್ಲಿ ಮಹಿಳೆಯರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ, ನಮ್ಮ ದೇಶದ ಮಹಿಳೆಯರಲ್ಲಿ ಅಂತಸ್ಸತ್ವ ಅಪಾರವಾಗಿದ್ದು ತಮ್ಮ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಕಠಿಣ ಪ್ರಯತ್ನ ನಡೆಸುತ್ತಾರೆ ಎಂದರು. ಮುದ್ರಾ ಯೋಜನೆಯಲ್ಲಿ ಸಾಲಸೌಲಭ್ಯ ಪಡೆದುಕೊಂಡವರಲ್ಲಿ ಶೇ.70ಕ್ಕೂ ಹೆಚ್ಚಿನವರು ಮಹಿಳೆಯರು. ಮಹಿಳೆಯರಲ್ಲಿ ಆರ್ಥಿಕ ಶಕ್ತಿ ಇದ್ದರೆ ಅವರು ಸಬಲೀಕರಣಗೊಂಡಂತೆ . ಹೈನುಗಾರಿಕೆ ಮತ್ತು ಪಶುಪಾಲನೆ ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಅಪಾರ ಎಂದ ಅವರು, ಮಹಿಳೆಯರ ಸಶಕ್ತೀಕರಣ ಮತ್ತು ಲಿಂಗ ಸಮಾನತೆಯ ನಿಟ್ಟಿನಲ್ಲಿ ಬಿಜೆಪಿ ಸರಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದರು.
ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಮಹಿಳೆಯರು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ . ಮಹಾತ್ಮಾ ಗಾಂಧೀಜಿ ಕೂಡಾ ಮಹಿಳಾ ಸಶಕ್ತೀಕರಣದ ಪ್ರತಿಪಾದಕರಾಗಿದ್ದರು ಎಂದು ಪ್ರಧಾನಿ ಹೇಳಿದರು.