ಸಿಪಿಎಂ-ಡಿವೆಎಫ್‌ಐ ಕಾರ್ಯಕರ್ತರಿಂದ ಮನಪಾಚೇರಿಗೆ ಮುತ್ತಿಗೆ
ನೀರು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಆಕ್ರೋಶ

ಮಂಗಳೂರು, ಎ.13: ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟನ್ನು ಎರಡು ಪಟ್ಟು ಎತ್ತರಕ್ಕೆ ಏರಿಸಿದ್ದರೂ ಎಲ್ಲ ದಿನಗಳಲ್ಲೂ ನೀರು ಪೂರೈಕೆ ಮಾಡಲು ಅಸಾಧ್ಯ ಎಂಬ ಮನಪಾ ನಿರ್ಧಾರವನ್ನು ಖಂಡಿಸಿ ಸಿಪಿಎಂ ಮತ್ತು ಡಿವೈಎಫ್‌ಐ ಮಂಗಳೂರು ನಗರ ದಕ್ಷಿಣ ಸಮಿತಿಯ ಜಂಟಿ ಆಶ್ರಯದಲ್ಲಿ ಗುರುವಾರ ಮನಪಾ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭ 32 ಕಾರ್ಯಕರ್ತರು ಬಂಧನಕ್ಕೊಳಗಾದರು.
ಕಳೆದ ವರ್ಷ ಇದೇ ದಿನ ತುಂಬೆ ಅಣೆಕಟ್ಟಿನಲ್ಲಿ 2.7 ಮೀ. ಎತ್ತರ ನೀರಿ ದ್ದರೆ, ಈ ವರ್ಷ 4.6 ಮೀ. ಎತ್ತರ ದಲ್ಲಿ ನೀರು ನಿಂತಿದೆ. ಹಾಗಾಗಿ ದಿನಂ ಪ್ರತಿ ನೀರು ಪೂರೈಕೆ ಮಾಡಿದರೂ ಕೂಡ ಮಳೆಗಾಲ ಆರಂಭವಾಗುವವರೆಗೆ ನೀರಿನ ಕೊರತೆ ಉಂಟಾಗದು. ಆದಾರೂ ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ಇದೆ ಎಂದು ಹೇಳಿ ರೇಶನಿಂಗ್ ಪದ್ಧತಿ ಜಾರಿ ಮಾಡ ಲಾಗುತ್ತಿದೆ ಎಂದು ಮೇಯರ್ ಕವಿತಾ ಸನಿಲ್ ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಕಳೆದ ವರ್ಷ ನೀರಿನ ಕೊರತೆ ಉಂಟಾದಾಗ ಎಸ್‌ಇಝಡ್, ಎಂಆರ್‌ಪಿಎಲ್ ಇತ್ಯಾದಿ ಉದ್ಯಮ ಸಂಸ್ಥೆಗಳಿಗೆ ಪೂರೈಸುವ ನೀರನ್ನು ಕಡಿತ ಮಾಡಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದರು. ಈ ವರ್ಷ ನೀರಿನ ಮಟ್ಟ ಎರಡು ಪಟ್ಟು ಹೆಚ್ಚಿ ರುವಾಗ, ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಉದ್ದಿಮೆಯವರಿಗೆ ಪೂರೈಕೆ ಮಾಡದೆ ನಾಗರಿಕರಿಗೆ ಕುಡಿಯುವ ನೀರು ಒದಗಿಸಲು ಯಾಕೆ ಸಾಧ್ಯವಿಲ್ಲ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು.
ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯ ದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಕಳೆದ ವರ್ಷ ನೀರಿನ ಕೊರತೆ ಉಂಟಾದಾಗ ನಗರದ ಲ್ಲಿರುವ ಕೆರೆ ಹಾಗೂ ಸಾರ್ವಜನಿಕ ಬಾವಿಗಳನ್ನು ದುರಸ್ತಿಪಡಿಸಲಾಯಿತು. 140 ಬಾವಿಗಳಿಗೆ ತಲಾ 50,000 ರೂ.ನಂತೆ ಕಾದಿರಿಸಲಾದ 7 ಲಕ್ಷ ರೂ. ಎಲ್ಲಿಗೆ ಹೋಯಿತು? ಗುಜ್ಜರಕೆರೆ, ಬೈಲಾಡಿಕೆರೆಗಳ ಹೂಳೆತ್ತುವ ಪ್ರಸ್ತಾಪಗಳನ್ನು ಕೈಗೆತ್ತಿಕೊಳ್ಳದಿರಲು ಕಾರಣಗಳೇನು? ನೀರಿನ ಟ್ಯಾಂಕರ್‌ಗಳ ಲಾಬಿಗೆ ಮಹಾನಗರ ಪಾಲಿಕೆ ಬಾಗಿದೆಯೇ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತ ನಾಗರಿಕರಿಗೆ ಕುಡಿಯುವ ನೀರು ಒದಗಿಸುತ್ತಿಲ್ಲ ಎಂದು ಪಾಲಿಕೆಯನ್ನು ಟೀಕೆ ಮಾಡುತ್ತಿರುವ ಬಿಜೆಪಿ, 7 ವರ್ಷಗಳ ಹಿಂದೆ ತಾನು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದಾಗ ನೀರು ಸಂಬಂಧಿಸಿ ಹೋರಾಟ ನಡೆಸಿದ್ದ ಕಮ್ಯುನಿಸ್ಟ್ ಮತ್ತು ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಪ್ರಹಾರ ನಡೆಸಿತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನೀರು ಒದಗಿಸುವುದಕ್ಕಿಂತ ರಾಜಕೀಯ ಪ್ರಯೋಜನ ಮಾತ್ರ ಮುಖ್ಯವಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಅಣಕಿಸಿದರು.
ಸಿಪಿಎಂ ಮಂಗಳೂರು ನಗರ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಸಿಪಿಎಂ ಮಂಗಳೂರು ನಗರ ಸಮಿತಿ ಸದಸ್ಯರಾದ ಜಯಂತಿ ಬಿ. ಶೆಟ್ಟಿ, ವಾಸುದೇವ ಉಚ್ಚಿಲ, ಡಿವೈಎಫ್‌ಐ ಜಿಲ್ಲಾ ಸಮಿತಿಯ ಸಂತೋಷ್ ಬಜಾಲ್, ಬಿ. ಕೆ. ಇಮ್ತಿಯಾಝ್, ಸಾದಿಕ್ ಕಣ್ಣೂರು ಪಾಲ್ಗೊಂಡಿದ್ದರು.
ಮನಪಾ ಕಚೇರಿಗೆ ನುಗ್ಗಿ ಮುತ್ತಿಗೆ ಹಾಕಿದ 32 ಮಂದಿ ಸಿಪಿಎಂ ಮತ್ತು ಡಿವೈಎಫ್‌ಐ ಕಾರ್ಯಕರ್ತರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿ ಬಳಿಕ ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.







