ಎಂಟು ವರ್ಷಗಳ ಹಳೆಯ ಕೊಲೆ ಪತ್ತೆ ಮಾಡಿದ ಟ್ಯಾಟೂ!

ಹೊಸದಿಲ್ಲಿ, ಎ.14: ಅದೃಷ್ಟಕ್ಕೆ ಸಿಕ್ಕಿದ ಸುಳಿವು ಹಾಗೂ ಬಲಗೈನಲ್ಲಿ ಹಾಕಿದ್ದ ಟ್ಯಾಟೂ ನೆರವಿನಿಂದ ಪೊಲೀಸರು, 2008ರಲ್ಲಿ ನಡೆದ 18 ವರ್ಷದ ಯುವತಿಯ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
2006ರಲ್ಲೇ ಈ ಕಥೆ ಆರಂಭವಾಗಿದೆ. 16 ವರ್ಷದ ಆರತಿ ಎಂಬ ಬಾಲಕಿ, ದಿಲ್ಲಿಯ ಸುಲ್ತಾನ್‌ಪುರಿ ನಿವಾಸಿ ಜತೆ ಪ್ರೇಮಪಾಶದಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಎರಡು ವರ್ಷಗಳ ಕಾಲ ಪ್ರಣಯ ಸಂಬಂಧ ಹೊಂದಿದ್ದ ಇವರು, ಬಾಲಕಿಗೆ 18 ತುಂಬಿದಾಗ ಇಬ್ಬರೂ ಜತೆಯಾದರು.
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಹುಡುಗ ವಿಜಯೇಂದ್ರ ಅಲಿಯಾಸ್ ರಿಂಕು ಉಡುಗೊರೆ ಹಾಗೂ ಹೂವುಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಮಗಳು ಖುಷಿಯಿಂದಿದ್ದಾಳೆ ಎಂಬ ಕಾರಣಕ್ಕೆ ಪೋಷಕರು ಇಬ್ಬರನ್ನೂ ಅವರ ಪಾಡಿಗೆ ಬಿಟ್ಟರು. ಆದರೆ 2008ರ ಬಳಿಕ ಪರಿಸ್ಥಿತಿ ಬದಲಾಯಿತು. ಇಬ್ಬರೂ ಪ್ರತೀದಿನ ಜಗಳವಾಡುವ ಹಂತಕ್ಕೆ ಬಂತು. ಒಂದು ತಿಂಗಳಲ್ಲೇ ಆರತಿ ನಾಪತ್ತೆಯಾದಳು.
ಕೆಲ ದಿನಗಳ ಬಳಿಕ ಆಕೆಯ ಪೋಷಕರಿಗೆ ಆರತಿ ಸಹಿ ಇರುವ ಒಂದು ಪತ್ರ ಬಂತು. ಅದರಲ್ಲಿ ತಾನು ಮತ್ತೊಬ್ಬ ಯುವಕನ ಜತೆ ಸಂಬಂಧ ಹೊಂದಿದ್ದು, ಆತನ ತೆಕ್ಕೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದರಿಂದ ರಿಂಕು ಕೂಡಾ ಭಿನ್ನ ಹಾದಿ ತುಳಿದ.
ಮನೆಯನ್ನು ಮಾರಿ, ಪಟೇಲ್ ನಗರದಲ್ಲಿ ಬಾಡಿಗೆ ಮನೆ ಹಿಡಿದ. 2009ರ ಅಕ್ಟೋಬರ್‌ನಲ್ಲಿ ಮತ್ತೊಬ್ಬಳ ಜತೆ ವಿವಾಹವಾದ. ಇವರಿಗೆ ಮೂವರು ಮಕ್ಕಳಿದ್ದಾರೆ.
ಆ ವರ್ಷದ ಎಪ್ರಿಲ್ 11ರಂದು ಎಸಿಪಿ ಜಸ್ಬೀರ್ ಸಿಂಗ್ ಎಂಬವವರು, ರಾಹುಲ್ ಎಂಬ ವ್ಯಕ್ತಿ ಈ ಹತ್ಯೆ ಪ್ರಕರಣದಲ್ಲಿ ಷಾಮೀಲಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದರು. ರಾಹುಲ್ ಅವರನ್ನು ಹಿಡಿದು ಪ್ರಶ್ನಿಸಿದಾಗ ರಿಂಕು ಕೂಡಾ ಸಿಕ್ಕಿ ಹಾಕಿಕೊಂಡಿದ್ದ.
ಪ್ರತೀದಿನ ಜಗಳದಿಂದ ಬೇಸತ್ತ ರಿಂಕು ಸೆಪ್ಟೆಂಬರ್ 23ರಂದು ಪತ್ನಿಯ ಸಹಿಯನ್ನು ಖಾಲಿ ಹಾಳೆಯಲ್ಲಿ ಪಡೆದು ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದ.