ಮಾಲಕಿಯನ್ನು ರಕ್ಷಿಸಲು ಹೋಗಿ ಪ್ರಾಣತೆತ್ತ ‘ಲಕ್ಕಿ’

ಸಾಂದರ್ಭಿಕ ಚಿತ್ರ
ಮುಂಬೈ, ಎ.14: ನಗರದ ಸಯಾನ್ ಕೊಳಿವಾಡ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ 'ಲಕ್ಕಿ' ಎಂಬ ಸಾಕು ನಾಯಿ ತನ್ನ ಮಾಲಕಿಯ ಪ್ರಾಣವನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡಿದೆ.
ವ್ಯಕ್ತಿಯೊಬ್ಬ ತನ್ನ ಮಾಲಕಿಯನ್ನು ಬೆದರಿಸುತ್ತಿರುವುದನ್ನು ನೋಡಿದ ಲಕ್ಕಿ ಮಧ್ಯ ಪ್ರವೇಶಿಸಿದ್ದೇ ತಡ ಆತ ಲಕ್ಕಿಗೆ ಚೂರಿಯಿಂದ ಇರಿದು ಕೊಂದು ಬಿಟ್ಟಿದ್ದಾನೆ. ಲಕ್ಕಿಯ ಮಾಲಕಿ ಸುಮತಿಯ ಜತೆ ಆಕೆಯ ಸ್ನೇಹಿತ ವೆಂಕಟೇಶ್ ದೇವೇಂದ್ರ (23) ವ್ಯಾಗ್ಯುದ್ಧದಲ್ಲಿ ತೊಡಗಿದ್ದಾಗ ಲಕ್ಕಿ ಅವರ ನಡುವೆ ಬಂದಿದ್ದಾಳೆ. ಸಿಟ್ಟುಗೊಂಡ ದೇವೇಂದ್ರ ತನ್ನಲ್ಲಿದ್ದ ಚೂರಿಯೊಂದನ್ನು ಹೊರತೆಗೆದಾಗ ಸುಮತಿ ಅಲ್ಲಿಂದ ಓಡಿದ್ದು, ಆಗ ಅಲ್ಲಿಗೆ ಬಂದ ಲಕ್ಕಿಯನ್ನು ನೋಡಿದ ಕೂಡಲೇ ಆತ ಅದಕ್ಕೆ ಚೂರಿಯಿಂದ ಇರಿದಿದ್ದಾನೆ.
ಸುಮತಿ ದಾಖಲಿಸಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 429 ಅನ್ವಯ ದೇವೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದಲ್ಲಿ ಆತನಿಗೆ ಐದು ವರ್ಷಗಳ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವ ಸಾಧ್ಯತೆ ಇದೆ.
ಆದರೆ ದೇವೇಂದ್ರ ತನ್ನ ಹೇಳಿಕೆಯಲ್ಲಿ ನಾಯಿ ತನ್ನನ್ನು ನೋಡಿ ಬೊಗಳುತ್ತಾ ತನ್ನ ಅಂಗಿಯನ್ನು ಹರಿದಿತ್ತು ಎಂದು ಹೇಳಿದ್ದಾನೆ. ಆತನನ್ನು ಈಗ ರೂ.5000 ಬಾಂಡ್ ಮೇಲೆ ಬಿಡುಗಡೆಗೊಳಿಸಲಾಗಿದೆ.