ಜಿಯೋಗೆ ಸಡ್ಡುಹೊಡೆದು ಅಚ್ಚರಿಯ ಡೇಟಾ ಆಫರ್ ಘೋಷಿಸಿದ ಏರ್ ಟೆಲ್!
244 ರೂ.ಗೆ 70 ಜಿಬಿ ಡಾಟಾ ಕೊಡುಗೆ!

ಹೊಸದಿಲ್ಲಿ,ಎ.14: ರಿಲಯನ್ಸ್ ಜಿಯೋ ತನ್ನ ಉಚಿತ ಸೇವೆಗಳನ್ನು ‘ಜಿಯೋ ಧನ್ ಧನಾ ಧನ್ ’ ಕೊಡುಗೆಯ ಹೆಸರಿನಲ್ಲಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಏರ್‌ಟೆಲ್ ಈಗ ಹೊಸ ಕೊಡುಗೆಯೊಂದನ್ನು ಘೋಷಿಸಿದೆ. ಈ ಕೊಡುಗೆಯಡಿ 244 ಮತ್ತು 399 ರೂ.ಗಳನ್ನು ಪಾವತಿಸುವ ಏರ್‌ಟೆಲ್ ಚಂದಾದಾರರು 70 ದಿನಗಳ ಅವಧಿಗೆ 70 ಜಿಬಿ ಡಾಟಾ ಪಡೆಯಲಿದ್ದಾರೆ. ಇದರೊಂದಿಗೆ 345 ರೂ.ಗಳ ಪ್ಯಾಕ್‌ನ್ನು ಪರಿಷ್ಕರಿಸಲಾಗಿದ್ದು, ಈ ಹಿಂದೆ ಘೋಷಿಸಿದ್ದ ದಿನಕ್ಕೆ ಒಂದು ಜಿಬಿ ಡಾಟಾದ ಬದಲಿಗೆ ಎರಡು ಜಿಬಿ ಡಾಟಾ ದೊರೆಯಲಿದೆ.
ಹೊಸ 244 ರೂ.ಪ್ಯಾಕ್‌ನಡಿ ಏರ್‌ಟೆಲ್ ಚಂದಾದಾರರು 4ಜಿ ಸ್ಮಾರ್ಟ್‌ಫೋನ್ ಮತ್ತು 4ಜಿ ಸಿಮ್‌ಕಾರ್ಡ್ ಹೊಂದಿದ್ದರೆ 70 ದಿನಗಳ ಕಾಲ ಪ್ರತಿದಿನ ಒಂದು ಜಿಬಿ ಡಾಟಾ ಪಡೆಯಲಿದ್ದಾರೆ. ಇದರ ಜೊತೆಗೆ ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ದಿನಕ್ಕೆ 300 ಮತ್ತು ವಾರಕ್ಕೆ 1,200 ನಿಮಿಷಗಳು ಮೀರದಂತೆ ಉಚಿತವಾಗಿ ಎಸ್‌ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಬಹುದು ಎಂದು ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಮತ್ತು ಮೈ ಏರ್‌ಟೆಲ್ ಆ್ಯಪ್‌ನಲ್ಲಿ ಪ್ರಕಟಿಸಿದೆ. ಉಚಿತ ಕರೆಗಳ ಮಿತಿಯನ್ನು ದಾಟಿದರೆ ಪ್ರತಿ ನಿಮಿಷಕ್ಕೆ 10 ಪೈಸೆ ಶುಲ್ಕ ವಿಧಿಸಲಾಗುತ್ತದೆ.
399 ರೂ.ಪ್ಯಾಕ್‌ನಡಿಯೂ ಏರ್‌ಟೆಲ್ ಚಂದಾದಾರರು 4ಜಿ ಸ್ಮಾರ್ಟ್‌ಫೋನ್ ಮತ್ತು 4ಜಿ ಸಿಮ್ ಕಾರ್ಡ್ ಹೊಂದಿದ್ದರೆ 70 ದಿನಗಳ ಕಾಲ ಪ್ರತಿದಿನ ಒಂದು ಜಿಬಿ ಡಾಟಾ ಪಡೆಯಲಿದ್ದಾರೆ. ಆದರೆ ಯಾವುದೇ ನೆಟ್‌ವರ್ಕ್‌ಗೆ 70 ದಿನಗಳ ಅವಧಿಯಲ್ಲಿ 3,000 ನಿಮಿಷಗಳ ಮಿತಿಗೊಳಪಟ್ಟು ಉಚಿತ ಕರೆಗಳನ್ನು ಮಾಡಬಹುದು. ಉಚಿತ ಕರೆಗಳ ಮಿತಿಯನ್ನು ದಾಟಿದರೆ ಪ್ರತಿ ನಿಮಿಷಕ್ಕೆ 10 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ದಿನಕ್ಕೆ 300 ನಿಮಿಷ ಮತ್ತು ವಾರಕ್ಕೆ 1,200 ನಿಮಿಷಗಳ ಮಿತಿಗೊಳಪಟ್ಟು ಉಚಿತ ಕರೆಗಳನ್ನು ಮಾಡಬಹುದಾಗಿದೆ.
ಪರಿಷ್ಕೃತ 345 ರೂ.ಪ್ಯಾಕ್‌ನಡಿ ಚಂದಾದಾರರು ಈಗ ದಿನಕ್ಕೆ ಒಂದು ಜಿಬಿಯ ಬದಲು ಎರಡು ಜಿಬಿ ಡಾಟಾ ಪಡೆಯಲಿದ್ದಾರೆ. ವಿಶೇಷವೆಂದರೆ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ 500 ಎಂಬಿ ಮತ್ತು ದಿನದ ಉಳಿದ ಅವಧಿಗೆ 500 ಎಂಬಿ ಬಳಕೆಯ ನಿರ್ಬಂಧವನ್ನು ತೆಗೆದುಹಾಕಲಾಗಿದೆ. 28 ದಿನಗಳ ಅವಧಿಯ ಈ ಪ್ಯಾಕ್ 399 ರೂ.ಗಳ ಪ್ಯಾಕ್‌ನಲ್ಲಿರುವ ಉಚಿತ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.
ಈ ಎಲ್ಲ ಪ್ಲಾನ್‌ಗಳು ಎ.15ರಿಂದ ಜಾರಿಗೊಳ್ಳಲಿವೆ. ಅಂದ ಹಾಗೆ 244 ಮತ್ತು 399 ರೂ.ಪ್ಯಾಕ್‌ಗಳು ಎಲ್ಲರಿಗೂ ಲಭ್ಯವಿಲ್ಲ. ಗ್ರಾಹಕರು ತಾವು ಈ ಪ್ಯಾಕ್‌ಗಳಿಗೆ ಅರ್ಹರೇ ಎನ್ನುವುದನ್ನು ಕಂಡುಕೊಳ್ಳಲು ಮೈ ಏರ್‌ಟೆಲ್ ಆ್ಯಪ್ ಅಥವಾ ಏರ್‌ಟೆಲ್ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕಾಗುತ್ತದೆ. ಅಲ್ಲದೆ,ಏರ್‌ಟೆಲ್‌ಗೆ ಪೋರ್ಟ್ ಆಗಲು ಬಯಸುವವರು ಮತ್ತು ಹೊಸದಾಗಿ ಏರ್‌ಟೆಲ್ ಸಿಮ್ ಖರೀದಿಸುವವರಿಗೆ ಈ ಕೊಡುಗೆ ದೊರೆಯುವುದಿಲ್ಲ.