ಗುಜರಾತ್: ಕ್ಲೋರಿನ್ ಅನಿಲ ಸೋರಿಕೆ: 19 ಜನರು ಆಸ್ಪತ್ರೆಗೆ ದಾಖಲು

ವಡೋದರಾ,ಎ.14: ನಗರದ ಹೊರವಲಯದಲ್ಲಿ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೋರ್ ಗ್ರಾಮದಲ್ಲಿ ನಿನ್ನೆ ರಾತ್ರಿ ಕ್ಲೋರಿನ್ ಅನಿಲ ಸೋರಿಕೆಯಾಗಿದ್ದು, ಅಸ್ವಸ್ಥಗೊಂಡಿರುವ 19 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕಿನ ಕ್ಲೋರಿನೇಷನ್ ಸಂದರ್ಭ ಅನಿಲವಿದ್ದ ಸಿಲಿಂಡರ್‌ನ ವಾಲ್ವ್‌ನಲ್ಲಿ ಸೋರಿಕೆಯಾಗಿತ್ತು. ಕಾರ್ಮಿಕರು ಸೇರಿದಂತೆ ಅಲ್ಲಿದ್ದ 19 ಜನರು ಕಣ್ಣು ಮತ್ತು ಗಂಟಲು ಉರಿಗೆ ತುತ್ತಾಗಿದ್ದು, ಇಲ್ಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಡೋದರಾ ಜಿಲ್ಲಾಧಿಕಾರಿ ಲೋಚನ್ ಸೆಹ್ರಾ ತಿಳಿಸಿದರು.
ಕ್ಲೋರಿನ್ ಅನಿಲ ಸಿಲಿಂಡರ್‌ಗಳನ್ನು ಪೂರೈಸುವ ಕಂಪನಿಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಧಾವಿಸಿ ಸೋರುತ್ತಿದ್ದ ಸಿಲಿಂಡರ್‌ನ್ನು ಸಮೀಪದ ಧಾಧಾರ್ ನದಿಯಲ್ಲಿ ನಿಷ್ಕ್ರಿಯಗೊಳಿಸಿದರು.
Next Story





