ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇರುವವರು ಕೋಮುವಾದಿಗಳ ಜತೆ ಎಂದಿಗೂ ಕೈಜೋಡಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ಹುಸಿ ಅಂಬೇಡ್ಕರ್ ವಾದಿಗಳ ಬಗ್ಗೆ ಎಚ್ಚರ ಅಗತ್ಯ’

ಬೆಂಗಳೂರು, ಎ. 14: ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಅನುಸರಿಸುವವರು, ಅವರ ಬಗ್ಗೆ ಅಭಿಮಾನ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ, ಮತ್ತು ‘ಸ್ವಾಭಿಮಾನ’ ಇರುವವರು ಕೋಮುವಾದಿಗಳ ಜತೆ ಎಂದಿಗೂ ಕೈಜೋಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸ್ವಾಭಿಮಾನ’ದ ಹೆಸರಿನಲ್ಲಿ ಕೋಮುವಾದಿಗಳೊಂದಿಗೆ ಕೈಜೋಡಿಸುವವರು ಅಂಬೇಡ್ಕರ್ ತತ್ವಗಳ ವಿರೋಧಿಗಳು ಎಂದು ಪರೋಕ್ಷವಾಗಿ ಶ್ರೀನಿವಾಸ ಪ್ರಸಾದ್ ವಿರುದ್ಧ ಕುಟುಕಿದರು.
ಎಚ್ಚರ ಅಗತ್ಯ: ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಅಂಬೇಡ್ಕರ್ ತತ್ವಗಳ ವಿರೋಧಿಗಳು ಅವರನ್ನು ಹೊಗಳಲು ಆರಂಭಿಸಿದ್ದಾರೆ. ಇಂತಹ ಜನರ ನಿಜಬಣ್ಣವನ್ನು ಶೋಷಿತರು ಅರ್ಥ ಮಾಡಿಕೊಳ್ಳಬೇಕು. ಮಾತ್ರವಲ್ಲ, ಎಚ್ಚರ ವಹಿಸಬೇಕೆಂದು ಸಿದ್ಧರಾಮಯ್ಯ ಸಲಹೆ ನೀಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಇಲ್ಲದ ಸಮಾಜವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಸ್ಪಶ್ಯತೆ, ಜಾತೀಯ ಅಸಮಾನತೆ ಇರುವ ದೇಶದಲ್ಲಿ ನನಗೆ ಯಾವುದೇ ಒಂದು ಜಾತಿ, ಧರ್ಮವೂ ಇಲ್ಲವೆಂದು ಹೇಳಿಕೊಳ್ಳಲು ಹಿಂಜರಿಯುವುದಿಲ್ಲವೆಂದು ಅಂಬೇಡ್ಕರ್ ಹೇಳಿದ್ದರು. ಅಸ್ಪಶ್ಯತೆ, ಅಸಮಾನತೆ ಹೋಗದೆ ಸಾಮಾಜಿಕ ನ್ಯಾಯ ಅಸಾಧ್ಯ ಎಂದು ಸಿದ್ಧರಾಮಯ್ಯ ಪ್ರತಿಪಾದಿಸಿದರು.
ಅಂಬೇಡ್ಕರ್ ಸ್ಫೂರ್ತಿ: ಶಿಕ್ಷಣದಿಂದ ಮಾತ್ರ ಶೋಷಿತ ಸಮುದಾಯವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಎಸ್ಸಿ- ಎಸ್ಟಿ ವರ್ಗದವರಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ 125 ವಸತಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತಿದ್ದು, ಆ ಎಲ್ಲ ಶಾಲೆಗಳಿಗೆ ಅಂಬೇಡ್ಕರ್ ಹೆಸರಿಡಲಾಗುವುದು. ಈ ಯೋಜನೆಗೆ ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದು ಸಿದ್ದರಾಮಯ್ಯ ನುಡಿದರು.
ರಾಜ್ಯ ಸರಕಾರ ಅಂಬೇಡ್ಕರ್ ಆಶಯದಂತೆ ಕಾರ್ಯ ನಿರ್ವಹಿಸುತ್ತಿದ್ದು, ಅಂಬೇಡ್ಕರ್ ತತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧ ಎಂದ ಸಿದ್ದರಾಮಯ್ಯ, ಅಂಬೇಡ್ಕರ್ ತತ್ವಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಗುರುಪ್ರಸಾದ್ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದ್ದು, ಅವರು ಆ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡಲಿ ಎಂದು ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಜೂನ್‌ನಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಅಂಬೇಡ್ಕರ್‌ರವರ ಬರಹ-ಭಾಷಣ ಕೃತಿಗಳ ಮರು ಮುದ್ರಣಕ್ಕೆ 3 ಕೋಟಿ ರೂ.ನೆರವು ನೀಡಲಾಗುವುದು ಎಂದು ಪ್ರಕಟಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಸರಕಾರದಿಂದ ನೀಡುವ ಅಂಬೇಡ್ಕರ್ ಹೆಸರಿನ ಪ್ರಶಸ್ತಿ ಘನತೆ-ಗೌರವ ಇರಲಿಲ್ಲ. ಇದೀಗ ಆ ಪ್ರಶಸ್ತಿಗೆ ಗೌರವ ತಂದುಕೊಡಲಾಗಿದೆ ಎಂದ ಅವರು, ನಾಲ್ಕು ವರ್ಷಗಳಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ 84 ಸಾವಿರ ಕೋಟಿ ರೂ.ಗಳನ್ನು ಒದಗಿಸಿದ್ದು, ಆ ಪೈಕಿ 50ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜವಾಬ್ದಾರಿ ಹೆಚ್ಚಿಸಿದೆ: ಡಾ.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಿದ ಮಂಡ್ಯ ಮೂಲದ ದಲಿತ ಮುಖಂಡ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಮಾಡಬೇಕು. ಸಂವಿಧಾನ-ಅಂಬೇಡ್ಕರ್ ಆಶಯದಂತೆ ಅಸ್ಪಶ್ಯತೆ, ಜಾತಿ ಅಸಮಾನತೆ ತೊಡೆದು ಹಾಕಲು ಸರಕಾರ ಬದ್ಧವಾಗಬೇಕು. ಅಂಬೇಡ್ಕರ್ ಪ್ರಶಸ್ತಿ ತನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ಭಡ್ತಿ ಪ್ರಶ್ನೆ: ಉದ್ಯೋಗದಲ್ಲಿ ಭಡ್ತಿ ಮೀಸಲಾತಿ ಕಲ್ಪಿಸಿರುವ ಸರಕಾರದ ನಿರ್ಧಾರಕ್ಕೆ ಕೋರ್ಟ್ ತಡೆ ಹಾಕಿರುವ ಸಂಬಂಧ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ಎದ್ದುನಿಂತು ಸಿಎಂ ಅವರನ್ನು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಆತನನ್ನು ಹೊರಗೆ ಕರೆದ್ಯೊಯ್ದ ಪ್ರಸಂಗವೂ ನಡೆಯಿತು.
ಸರಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ತಡೆ ಹಾಕಿರುವ ನ್ಯಾಯಾಲಯದ ತೀರ್ಪಿನ ವಿರುದ್ದ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ದಲಿತ ಮುಖಂಡರೊಬ್ಬರು ಘೋಷಣೆ ಕೂಗಿದ ಪ್ರಸಂಗ ಡಾ. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ ಎದ್ದುನಿಂತ ದಲಿತ ಮುಖಂಡರೊಬ್ಬರು ಉದ್ಯೋಗ ಮೀಸಲಾತಿಗೆ ತಡೆ ಹಾಕಿರುವ ತೀರ್ಪನ್ನು ತೆರವುಗೊಳಿಸಿ ಆಗ ಮಾತ್ರ ಈ ಸರಕಾರ ದಲಿತಪರ ಎಂದು ಏರು ಧ್ವನಿಯಲ್ಲಿ ಒತ್ತಾಯಿಸಿದರು. ಘೋಷಣೆ ಕೂಗಿದ ದಲಿತ ಮುಖಂಡನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನಪಡಿಸಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಬಿ.ಕೆ ಟ್ರಸ್ಟ್‌ನ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಸಲಹೆಗಾರ ಇ.ವೆಂಕಟಯ್ಯ, ಕಾರ್ಯದರ್ಶಿ ಮಣಿವಣ್ಣನ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್, ಡಿ.ಜಿ. ಸಾಗರ್, ಮಾವಳ್ಳಿ ಶಂಕರ್, ಶ್ರೀಧರ ಕಲಿವೀರ, ಮಾವಳ್ಳಿ ಶಂಕರ್, ಕೆ.ಬಿ.ಸಿದ್ಧಯ್ಯ ಇನ್ನಿತರರು ಉಪಸ್ಥಿತರಿದ್ದರು.
‘ಸರಕಾರಿ ಉದ್ಯೋಗದಲ್ಲಿ ಭಡ್ತಿ ಮೀಸಲಾತಿ ನೀಡಲೇಬೇಕು. ಆ ಮಾತ್ರ ಸಮಾನತೆ ಸಾಧ್ಯ. ಹೀಗಾಗಿ ಭಡ್ತಿ ಮೀಸಲಾತಿ ವಿಚಾರದಲ್ಲಿ ಸರಕಾರಕ್ಕೆ ಬದ್ಧತೆ ಇದೆ. ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ದಲಿತ ಸಮುದಾಯಕ್ಕೆ ಸಂಶಯ ಬೇಡ. ಇದು ನಮ್ಮ ಬದ್ಧತೆ. ಮಾತ್ರವಲ್ಲ, ಕರ್ತವ್ಯವೂ ಹೌದು’
-ಸಿದ್ಧರಾಮಯ್ಯ ಮುಖ್ಯಮಂತ್ರಿ







