ಭೀತಿ ಹುಟ್ಟಿಸುತ್ತಿರುವ ನ್ಯಾಯಾಧೀಶರ ಮನಸ್ಥಿತಿ: ಸಿ.ಎಸ್.ದ್ವಾರಕಾನಾಥ್

ಬೆಂಗಳೂರು, ಎ.14: ನ್ಯಾಯಾಂಗದಲ್ಲಿ ಮೂಲಭೂತವಾದಿಗಳು ಹೆಚ್ಚುತ್ತಿರುವುದರಿಂದ ನಕಲಿ ದೇಶ ಭಕ್ತರ ರಾಷ್ಟ್ರೀಯವಾದವನ್ನು ನ್ಯಾಯಾಲಯಗಳು ಘೋಷಣೆ ಮಾಡುವ ಭೀತಿ ದೇಶಕ್ಕೆ ಎದುರಾಗಿದೆ ಎಂದು ನ್ಯಾಯವಾದಿ ಸಿ.ಎಸ್.ದ್ವಾರಕಾನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಬನ್ನಪ್ಪ ಪಾರ್ಕ್‌ನಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಾಗೂ ಜನಾಂದೋಲನಗಳ ಮಹಾಮೈತ್ರಿ ಸಹಯೋಗದಲ್ಲಿ ಆಯೋಜಿಸಿದ್ದ ಜನತೆಯ ಹಕ್ಕುಗಳ ದಿನದ ಬೃಹತ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯತೆ ಎನ್ನುವುದು ಬಾವುಟ, ಭೂಪಟದಲ್ಲಿಲ್ಲ. ಆದರೆ ನಕಲಿ ದೇಶಭಕ್ತರು ಇದನ್ನೇ ರಾಷ್ಟ್ರೀಯತೆ ಎಂದು ಬಿಂಬಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಒಬ್ಬ ಶೀಘ್ರ ಲಿಪಿಗಾರನಾಗಬೇಕಾದರೆ 2-3 ಪರೀಕ್ಷೆಗಳನ್ನು ಬರೆಯಬೇಕು. ಆದರೆ ನ್ಯಾಯಾಧೀಶರ ನೇಮಕಕ್ಕೆ ಯಾವುದೇ ಪರೀಕ್ಷೆಗಳಿಲ್ಲ. ಮೆಟ್ರಿಕ್ಯೂಲೇಷನ್ ಫೇಲ್ ಆಗಿದ್ದರೂ ಪರವಾಗಿಲ್ಲ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗೆ ನೇಮಕವಾಗುತ್ತಿದ್ದಾರೆ. ನಾಮನಿರ್ದೇಶಿತರಿಂದ ನೇಮಕವಾಗುವ ನ್ಯಾಯಾಧೀಶರಿಂದ ನಕಲಿ ದೇಶಭಕ್ತರ ರಾಷ್ಟ್ರೀಯವಾದವನ್ನು ಘೋಷಣೆ ಮಾಡುವ ಆತಂಕ ದೇಶಕ್ಕೆ ಎದುರಾಗಿದೆ ಎಂದರು.
ದೇಶದಲ್ಲಿ ಗೋಳ್ವಾಲ್ಕರ್ ರಾಷ್ಟ್ರೀಯತೆ ಮತ್ತು ಅಂಬೇಡ್ಕರ್ ರಾಷ್ಟ್ರೀಯತೆಯ ನಡುವೆ ಸಂಘರ್ಷ ಶುರುವಾಗಿದೆ. ಗೋಳ್ವಾಲ್ಕರ್ ರಾಷ್ಟ್ರೀಯತೆಯನ್ನು ನಮ್ಮ ಮೇಲೆ ಹೇರಿಬಿಡುವ ಅಪಾಯವಿದೆ. ಈ ದೇಶವನ್ನ ರಕ್ಷಣೆ ಮಾಡಲು ಸಾಧ್ಯವಿರುವುದು ಅಂಬೇಡ್ಕರ್ ಚಿಂತನೆಗಳಿಂದ ಮಾತ್ರ. ಇವರ ಚಿಂತನೆಗಳಲ್ಲಿ ರಾಷ್ಟ್ರೀಯವಾದ ಅಡಗಿದೆ. ಇಲ್ಲಿ ಪ್ರೀತಿ, ಸಮಾನತೆ ಎಲ್ಲ ಇವೆ. ನಕಲಿ ದೇಶದ್ರೋಹಿಗಳನ್ನು ಅಳಿಸಿ ಸಂವಿಧಾನ ಉಳಿಸಿಕೊಳ್ಳಬೇಕಾದರೆ ಅಂಬೇಡ್ಕರ್‌ರವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.
ಮೀಸಲಾತಿ ಎಂದರೆ ದಾನವಲ್ಲ. ಅದು ದೇಶದಲ್ಲಿ ಸಮಾನತೆ ಬರುವವರೆಗೂ ಇರಲೇಬೇಕಾದ ಪ್ರಾತಿನಿಧ್ಯ. ಭಡ್ತಿ ಮೀಸಲಾತಿಯ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗಮನಿಸಿದರೆ ನ್ಯಾಯಾಧೀಶರ ಮನಸ್ಥಿತಿ ಅರಿವಾಗುತ್ತದೆ ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ದಿಡ್ಡಳ್ಳಿ ನಿರಾಶ್ರಿತರಿಗೆ ಭೂಮಿ ಮತ್ತು ವಸತಿಯನ್ನು ಒಂದು ತಿಂಗಳೊಳಗೆ ಕಲ್ಪಿಸಲು ಸರಕಾರ ಮಾತು ಕೊಟ್ಟಿದೆ. ದಿಡ್ಡಳ್ಳಿ ನಿರಾಶ್ರಿತರಿಗೆ ಒಂದು ತಿಂಗಳೊಳಗೆ ಭೂಮಿ ಮತ್ತು ವಸತಿಯನ್ನು ಕಲ್ಪಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೋಷಿತರ ರಕ್ಷಣೆಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ದೇಶದಲ್ಲಿ ಸಮಾನತೆ ಬಂದಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಕುರಿತು ಸೊಲ್ಲೆತ್ತುವ ಸರಕಾರಗಳು ಅಂಬೇಡ್ಕರ್ ಆಶಯಗಳಿಗೆ ವಂಚನೆ ಮಾಡಿವೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಸಮಾಜ ಪರಿರ್ವತನ ಆಂದೋಲನದ ಮುಖ್ಯಸ್ಥ ಎಸ್.ಆರ್.ಹಿರೇಮಠ್, ಎಸ್‌ಡಿಪಿಐನ ಮುಖ್ಯಸ್ಥ ಅಝೀಝ್, ಪತ್ರಕರ್ತೆ ಗೌರಿ ಲಂಕೇಶ್, ಭ್ರಷ್ಟಾಚಾರ ನಿರ್ಮೂಲನ ವೇದಿಕೆಯ ರವಿ ಕೃಷ್ಣಾರೆಡ್ಡಿ, ಹೋರಾಟಗಾರ ನೂರ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.







