ಡಿಜಿಧನ್ ಭ್ರಷ್ಟಾಚಾರದ ವಿರುದ್ಧದ ಸ್ವಚ್ಛತಾ ಅಭಿಯಾನ: ಮೋದಿ

ನಾಗ್‌ಪುರ, ಎ.14: ಡಿಜಿಟಲ್ ಪಾವತಿ ವ್ಯವಸ್ಥೆಯ ಡಿಜಿಧನ್ ಅಭಿಯಾನವು ಭ್ರಷ್ಟಾಚಾರ ಎಂಬ ಪೀಡೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿಯ ದೀಕ್ಷಭೂಮಿಯಲ್ಲಿ ಆಯೋಜಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಅವರ 126 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ಗೆ ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಇದೇ ವೇಳೆ ಅವರು ಭೀಮ್ (ಬಿಎಚ್‌ಐಎಂ) ಆ್ಯಪ್‌ನಡಿ - ವೈಯಕ್ತಿಕ ಬಳಕೆದಾರರಿಗೆ ‘ರೆಫರಲ್’ ಬೋನಸ್ ಸೌಲಭ್ಯ ಮತ್ತು ವ್ಯಾಪಾರಿಗಳಿಗೆ ಹಣ ವಾಪಸು ನೀಡುವ -ಎರಡು ನೂತನ ಯೋಜನೆಗಳಿಗೆ ಚಾಲನೆ ನೀಡಿದರು.
ಡಿಜಿಧನ್ ಅಭಿಯಾನವು ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಸ್ವಚ್ಛತಾ ಅಭಿಯಾನವಾಗಿದೆ ಎಂದ ಮೋದಿ, ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವಂತೆ ಯುವಜನತೆಗೆ ಕರೆ ನೀಡಿದರು. ‘ಭೀಮ್’ ಆ್ಯಪ್‌ಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವವರಿಗೆ 10 ರೂ. ಹಣ ವಾಪಾಸು ನೀಡುವ ವ್ಯವಸ್ಥೆಯಡಿ, ಒಂದು ದಿನಕ್ಕೆ 20 ಸದಸ್ಯರನ್ನು ಶಿಫಾರಸು ಮಾಡಿದವರು 200 ರೂ. ಗಳಿಸಲು ಸಾಧ್ಯ ಎಂದವರು ಹೇಳಿದರು. ಆಧಾರ್ ಸಂಖ್ಯೆ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ ‘ಭೀಮ್’ ಆ್ಯಪ್ ದೇಶದಾದ್ಯಂತ ಹಲವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಹಣಕಾಸಿನ ವ್ಯವಹಾರದ ಬದಲು ಇದೀಗ ಮೊಬೈಲ್ ಮೂಲಕ ವ್ಯವಹರಿಸುವ ಕಾಲಕ್ಕೆ ನಾವು ತಲುಪಿದ್ದೇವೆ ಎಂದು ಮೋದಿ ತಿಳಿಸಿದರು.
ನವೀಕರಿಸಬಹುದಾದ ಇಂಧನ ವ್ಯವಸ್ಥೆಯ ಮಹತ್ವದ ಕುರಿತು ತಿಳಿಸಿದ ಪ್ರಧಾನಿ, 21ನೆ ಶತಮಾನದಲ್ಲಿ ಜೀವನಾಧಾರವಾಗಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಸರಕಾರ ಆದ್ಯತೆ ನೀಡಿದೆ ಎಂದರು. ಇದೇ ವೇಳೆ ಅವರು ನಾಗ್‌ಪುರದಲ್ಲಿ ಐಐಎಂ, ಐಐಐಟಿ ಮತ್ತು ಎಐಐಎಂಎಸ್ ಸಂಸ್ಥೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಅಲ್ಲದೆ ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡುವ ಉದ್ದೇಶದ ಮೆಗಾ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿದರು. ಲಕ್ಕೀ ಗ್ರಾಹಕ ಯೋಜನೆಯಡಿ 1 ಕೋಟಿ ರೂ. ಬಹುಮಾನ ಪಡೆದ ಮಹಾರಾಷ್ಟ್ರದ ಲಾತೂರು ನಗರದ ಶ್ರದ್ಧಾರನ್ನು ಪ್ರಧಾನಿ ಮೋದಿ ಅಭಿನಂದಿಸಿದರು.







