ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಬೆಂಕಿ ಭಯಭೀತರಾದ ಪ್ರವಾಸಿಗಳು

ಜೈಪುರ,ಎ.14: ರಾಜಸ್ಥಾನದ ಮೌಂಟ್ ಅಬುವಿನ ಅರಾವಳಿ ಬೆಟ್ಟದ ಸಮೀಪವಿರುವ ಅರಣ್ಯದಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಜಿಲ್ಲಾಡಳಿತವು ಸಿಆರ್‌ಪಿಎಫ್ ಮತ್ತು ಭಾರತೀಯ ವಾಯುಪಡೆಯ ನೆರವಿನೊಂದಿಗೆ ನಾಲ್ಕು ಗಂಟೆಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ.
ರಾಜಸ್ಥಾನದ ಏಕೈಕ ಗಿರಿಧಾಮ, ಮರಳುಗಾಡಿನ ಕಾಶ್ಮೀರವೆಂದೇ ಹೆಸರಾಗಿರುವಮೌಂಟ್ ಅಬುವಿನಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರವಾಸಿಗಳು ಬೆಂಕಿಯ ಸುದ್ದಿ ಹರಡುತ್ತಿದ್ದಂತೆ ಭಯಭೀತರಾಗಿದ್ದರು. ದಟ್ಟಾರಣ್ಯದ ನಡುವೆ, ಈ ಗಿರಿಧಾಮದ ಪ್ರಸಿದ್ಧ ಮಧುಚಂದ್ರ ತಾಣಗಳಲ್ಲೊಂದಾದ ಸನ್‌ಸೆಟ್ ಪಾಯಿಂಟ್ ಬಳಿ ಕಾಣಿಸಿಕೊಂಡಿದ್ದ ಬೆಂಕಿ ಅಧಿಕಾರಿಗಳನ್ನು ತುದಿಗಾಲುಗಳಲ್ಲಿ ನಿಲ್ಲಿಸಿತ್ತು.
ಬೆಂಕಿಗೆ ನಿಖರವಾದ ಕಾರಣವೇನು ಎನ್ನುವುದು ಗೊತ್ತಾಗಿಲ್ಲವಾದರೂ, ಹೆಚ್ಚುಕಡಿಮೆ ಪ್ರತಿ ವರ್ಷ ಈ ಸಮಯದಲ್ಲಿ ತಾಪಮಾನದ ಏರಿಳಿತ ಮತ್ತು ಒಣಎಲೆಗಳು ರಾಶಿಯಾಗಿ ಬೀಳುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿರುತ್ತವೆ ಎಂದು ಡಿಎಸ್‌ಪಿ ವಿಜಯಪಾಲ್ ಸಿಂಗ್ ಸಂಧು ಸುದ್ದಿಸಂಸ್ಥೆಗೆ ತಿಳಿಸಿದರು.