ಕೋಟೆಕಾರ್: ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಯುವಕ ಮೃತ್ಯು
ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಲು ತುರವೇ ಆಗ್ರಹ

ಉಳ್ಳಾಲ, ಎ.14: ಬೋರ್‌ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ಕೋಟೆಕಾರು ಬೀರಿ ಸಮೀಪ ಸಂಭವಿಸಿದೆ. ಘಟನೆಯಲ್ಲಿ ಇನ್ನೋರ್ವ ಯುವಕ ಗಾಯಗೊಂಡಿದ್ದಾನೆ.
ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ (20) ಮೃತಪಟ್ಟಿದ್ದು, ಕೊಣಾಜೆ ತಿಬ್ಲೆಪದವಿನ ಶರೀಫ್ (25) ಗಾಯಗೊಂಡಿದ್ದಾರೆ.
ಕಲೀಲ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ 6 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸುಮಾರು ನಾಲ್ಕು ಪೈಪುಗಳನ್ನು ಮೇಲಕ್ಕೆತ್ತಿದ್ದ ಉಸ್ಮಾನ್ ಮತ್ತು ಶರೀಫ್, ಐದನೇ ಪೈಪನ್ನು ಮೇಲಕ್ಕೆತ್ತುವ ಸಂದರ್ಭ ಪೈಪ್ ಮೇಲಿದ್ದ ಹೈಟೆನ್ಶನ್ ತಂತಿಗೆ ತಗಲಿದೆ. ಪರಿಣಾಮ ಉಸ್ಮಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಶರೀಫ್ ರನ್ನು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೂಕ್ತ ಪರಿಹಾರ ಒದಗಿಸಲು ತುರವೇ ಆಗ್ರಹ: ಬೋರ್‌ವೆಲ್ ಕಾಮಗಾರಿ ನಡೆಸುತ್ತಿದ್ದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಸರಕಾರ ಶೀಘ್ರ ಪರಿಹಾರ ಒದಗಿಸಬೇಕು. ಕಾಮಗಾರಿ ವೇಳೆ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಕೋಟೆಕಾರು ಪಪಂನ ಕಾಮಗಾರಿ ನಡೆಸುತ್ತಿದ್ದುದರಿಂದ, ಸಂಬಂಧಿಸಿದ ಪಂಚಾಯತ್ ಕೂಡಾ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಸೂಕ್ತ ಪರಿಹಾರದೊಂದಿಗೆ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಆಗ್ರಹಿಸಿದ್ದಾರೆ.







