ಅಸಮಾನತೆ ಇರುವವರೆಗೆ ಭಾರತ ಒಂದು ದೇಶವಾಗುವುದಿಲ್ಲ:ಶಿವಸುಂದರ್
ರಾಜ್ಯಮಟ್ಟದ ಬಿ.ಆರ್.ಅಂಬೇಡ್ಕರ್ ಅಧ್ಯಯನ ಶಿಬಿರ ಉದ್ಘಾಟನೆ

ಉಡುಪಿ, ಎ.14: ಜಾತಿ, ಲಿಂಗ ತಾರತಮ್ಯ, ವರ್ಗ ಅಸಮಾನತೆ ಇರುವವರೆಗೆ ಭಾರತ ಒಂದು ದೇಶವಾಗುವುದಿಲ್ಲ. ನಾವು ಮನುಷ್ಯರಾಗುವುದಿಲ್ಲ ಮತ್ತು ನಮ್ಮ ಮನುಷ್ಯತ್ವ ಜಾಗೃತವಾಗುವುದಿಲ್ಲ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಪುರಭವನದ ಮಿನಿಹಾಲ್‌ನಲ್ಲಿ ನಡೆದ ಮೂರು ದಿನಗಳ ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯಮಟ್ಟದ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಂಬೇಡ್ಕರ್ ಕಂಡ ರಾಜಕೀಯ, ಸಾಮಾಜಿಕ ಆರ್ಥಿಕ ಕನಸಿಗೆ ತದ್ವಿರುದ್ಧ ವಾದ ದಿಕ್ಕಿನಲ್ಲಿ ಈ ದೇಶ ಸಾಗುತ್ತಿದೆ. ಇದರ ಪರಿಣಾಮವಾಗಿ ನಾವು ದೇಶದಲ್ಲಿ ಸಾರ್ವಭೌಮತೆ ಹಾಗೂ ಅಧಿಕಾರವಿಲ್ಲದ ಗಂಭೀರವಾದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದ ಅವರು, ನಾವು ಇಂದು ಬೇಕಾದುದನ್ನು ತಿನ್ನಲಾಗದ, ಮುಕ್ತವಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದೇವೆ. ಈ ಮೂಲಕ ಯುವಜನತೆಯ ಮುಂದೆ ಕೆಟ್ಟ ಭಾರತವನ್ನು ಬಿಟ್ಟು ಹೋಗುತ್ತಿದ್ದೇವೆ. ಆದುದರಿಂದ ಈ ಭಾರತ ವನ್ನು ಮಾನವೀಯಗೊಳಿಸಬೇಕಾಗಿದೆ ಎಂದರು.
ರಾಜಕೀಯ ಪ್ರಜಾತಂತ್ರ ಜೊತೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರ ಕೂಡ ಅತಿ ಅಗತ್ಯ. ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಗುವವರೆಗೆ ಈಗ ಇರುವ ರಾಜಕೀಯ ಸ್ವಾತಂತ್ರ್ಯ ಉಪಯೋಗಕ್ಕೆ ಬರುವುದಿಲ್ಲ. ಈಗಿರುವ ಸಾಮಾಜಿಕ ರಚನೆಯು ಶ್ರೀಮಂತರ, ಪುರುಷ ಅಹಂಕಾರಿಗಳ, ಅಧಿಕಾರಸ್ಥರ ಪರವಾಗಿದೆ. ಅದುವೇ ಜಾತಿ ಹಾಗೂ ಮನುವಾದ ವ್ಯವಸ್ಥೆ. ಇದು ಹೋಗುವ ವರೆಗೆ ನಮ್ಮ ಸ್ವಾತಂತ್ರಕ್ಕೆ ಅರ್ಥ ಇರುವುದಿಲ್ಲ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದರು.
ದೇಶದ ಮಹಾನ್ ದಾರ್ಶನಿಕರನ್ನು ನಾವು ಮೂರು ರೀತಿಯಲ್ಲಿ ಕೊಲ್ಲುತ್ತಿದ್ದೇವೆ. ನೆನಪಿಲ್ಲದಂತೆ ಅವರನ್ನು ಚರಿತ್ರೆಯಿಂದ ಅಳಿಸುವುದು, ಮಿತ್ರರನ್ನು ಶತ್ರುಗಳನ್ನಾಗಿ ಕಲ್ಪಿಸುವುದು ಮತ್ತು ಅವರನ್ನು ದೇವರನ್ನಾಗಿ ಮಾಡುವುದು. ಹೀಗೆ ದೇವರು ಮಾಡುವುದರಿಂದ ಅವರೊಂದಿಗೆ ಸಂವಾದ ಸಾಧ್ಯವಿಲ್ಲ. ಆದರೆ ಅಂಬೇಡ್ಕರ್ ದೇವರಲ್ಲ, ಪರ್ಯಾಯ ಚಿಂತನೆಯನ್ನು ನಮ್ಮ ಮುಂದೆ ಇಟ್ಟ ಗುರು. ನಮ್ಮೊಳಗಿನ ಮನುಷ್ಯತ್ವವನ್ನು ಜಾಗೃತಗೊಳಿಸುವ ಮಾನವತವಾದಿ, ಪ್ರಜಾತಂತ್ರವಾದಿ ಎಂದು ಅವರು ತಿಳಿಸಿದರು.
ಶಿಬಿರವನ್ನು ಉದ್ಘಾಟಿಸಿದ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಜ್ಯದಲ್ಲಿದ್ದ 3.5 ಲಕ್ಷ ಎನ್ನೆಸ್ಸೆಸ್ ಸ್ವಯಂ ಸೇವಕರ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ನೀಡಲಾಗಿದ್ದು, ಅದರಂತೆ 4.5 ಲಕ್ಷ ಸ್ವಯಂ ಸೇವಕರು ಸೇರ್ಪಡೆಗೊಂಡಿ ದ್ದಾರೆ. ರಾಜ್ಯದ ಬಜೆಟ್‌ನಲ್ಲಿ ಎನ್ನೆಸ್ಸೆಸ್ ಗೆ ನೀಡುವ ಅನುದಾನವನ್ನು 5 ಕೋಟಿಯಿಂದ 13 ಕೋಟಿ ರೂ.ಗೆ ಹಾಗೂ ಕ್ರೀಡಾ ಇಲಾಖೆಯ ಬಜೆಟ್‌ನ್ನು 145 ಕೋಟಿಯಿಂದ 285 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಅಜ್ಜರಕಾಡು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ ರಾವ್ ಉಪಸ್ಥಿತರಿದ್ದರು.
ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದ ನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿಯ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಪ್ರೊ.ವಿನಿತಾ ರೈ ವಂದಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 20 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.







