ಮೀಸಲಾತಿ ರಹಿತವಾಗಿ ಮುಂದುವರಿಯಲು ದಲಿತರು ಪ್ರಯತ್ನಿಸಲಿ: ಮೋಟಮ್ಮ

ಮೂಡಿಗೆರೆ, ಎ.14: ದಲಿತ ವರ್ಗ ಮೀಸಲಾತಿಯನ್ನು ನಂಬಿ ಮುಂದುವರಿಯುವುದಕ್ಕಿಂತ ಮೀಸಲಾತಿ ರಹಿತವಾಗಿ ಮುಂದೆ ಸಾಗುವಲ್ಲಿ ಪ್ರಯತ್ನಿಸಿದರೆ ಮೇಲು-ಕೀಳೆಂಬ ತಾರತಮ್ಯವನ್ನು ತೊಡೆದು ಹಾಕಿ ಡಾ.ಬಿ.ಆರ್.ಅಂಬೇಡ್ಕರ್‌ರ ಮಾರ್ಗದರ್ಶನದಂತೆ ನಡೆಯಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಹೇಳಿದರು.
ತಾಲೂಕು ಆಡಳಿತದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೇ, ಡಾ.ಬಾಬು ಜಗಜೀವನ್‌ರಾವ್ ಅವರ 110ನೇ, ಭಗವಾನ್ ಮಹಾವೀರರ ಹಾಗೂ ದೇವರ ದಾಸಿಮಯ್ಯ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಸರ್ವ ಜನಾಂಗವನ್ನು ಒಂದುಗೂಡಿಸಲೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರ್ಪಡೆಗೊಳಿಸಿದ್ದರು. ಇಂದಿನ ದಿನಗಳಲ್ಲಿ ದಲಿತರಿಗೆ ಮೀಸಲಾತಿಯಿಂದ ಕೀಳು ಎಂಬ ಭಾವನೆ ಸಮಾಜದಲ್ಲಿ ವ್ಯಾಪಕವಾಗಿರುವುದರಿಂದ ದಲಿತರು ಮೇಲ್ವರ್ಗದವರೊಂದಿಗೆ ಕೈಜೋಡಿಸುವ ಅಗತ್ಯವಿದೆ ಎಂದು ಹೇಳಿದರು.
ಶಾಸಕ ಬಿ.ಬಿ.ನಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷ ಕೆ.ಸಿ.ರತನ್ ಉದ್ಘಾಟಿಸಿದರು.
ಕೋರ್ಟ್ ವಕೀಲ ಶ್ರೀಧರ್ ಪ್ರಭು, ಅಂಬೇಡ್ಕರ್ ಅವರನ್ನು ದಲಿತ ನಾಯಕರೆಂದು ದಲಿತರೇ ಒಪ್ಪಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮೇಲ್ವರ್ಗವೂ ತಮಗೆ ಅಂಬೇಡ್ಕರ್ ವಾದ ಸೇರಿಲ್ಲವೆನ್ನುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮೂಹಿಕ ಜಗತ್ತಿನ ನಾಯಕರೇ ಹೊರತು, ಒಂದು ವರ್ಗಕ್ಕೆ ಸೇರಿದ ನಾಯಕರಲ್ಲ. ದಲಿತರು ಹಾಗೂ ಮೇಲ್ವರ್ಗದವರು ಈ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಸುಕುಮಾರ್ ಬಲ್ಲಾಳ್ ಭಗವಾನ್ ಮಹಾವೀರರ ಬಗ್ಗೆ ಮಾತನಾಡಿದರು. ಅರಣ್ಯ ವಸತಿ ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ದೇವರ ದಾಸಿಮಯ್ಯ ಅವರ ಕುರಿತು ಮಾತನಾಡಿದರು.
ಇದೇ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುವಿಗಳಿಗೆ ಸವಲತ್ತು, ಶಿಕ್ಷಣ ಇಲಾಖೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಪಂ ಸದಸ್ಯರಾದ ಶಾಮಣ್ಣ, ಅಮಿತಾ ಮುತ್ತಪ್ಪ, ನಿಖಿಲ್ ಚಕ್ರವರ್ತಿ, ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ಪಪಂ ಅಧ್ಯಕ್ಷೆ ರಮೀಜಾಬಿ, ಸದಸ್ಯರಾದ ಟಿ.ಎ.ಮದೀಶ್, ಪಾರ್ವತಮ್ಮ, ಎಚ್.ಪಿ.ರಮೇಶ್, ಷಣ್ಮುಖಾನಂದ, ಎಪಿಎಂಸಿ ಅಧ್ಯಕ್ಷ ಎಂ.ಸಿ.ನಾಗೇಶ್, ತಾಪಂ ಸದಸ್ಯರಾದ ರಂಜನ್ ಅಜಿತ್‌ಕುಮಾರ್, ಬಿ.ಎಲ್.ದೇವರಾಜ್, ಮುಖಂಡರಾದ ಎಂ.ಎಸ್.ಅನಂತ್, ಹಳೇಕೋಟೆ ರಮೇಶ್, ಮಂಚೇಗೌಡ, ಯು.ಬಿ.ಮಂಜಯ್ಯ, ಬಿ.ಎಂ.ಶಂಕರ್, ಲೋಕವಳ್ಳಿ ರಮೇಶ್, ಯು.ಆರ್.ರುದ್ರಯ್ಯ, ಎಂ.ಎಸ್.ಕೃಷ್ಣ, ಸಿ.ಕೆ.ಇಬ್ರಾಹಿಂ, ತಹಸೀಲ್ದಾರ್ ನಂದಕುಮಾರ್, ವೃತ್ತನಿರೀಕ್ಷಕ ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ, ದೈಹಿಕ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಎ.ಶಿವಪ್ಪ ಮತ್ತಿತರರಿದ್ದರು.







