ಮನುವಾದದ ನಿರ್ಮೂಲನೆಗೆ ಅಂಬೇಡ್ಕರ್ ವಾದ ಅಗತ್ಯ: ಪ್ರೊ.ಕಾವಲಮ್ಮ
‘ಭೀಮರತ್ನ’ ಪ್ರಶಸ್ತಿ ಪ್ರದಾನ
ಬೆಂಗಳೂರು, ಎ.14: ಆಧುನಿಕ ಬದುಕಿನಲ್ಲಿ ಮನುವಾದವು ಭಿನ್ನ ಸ್ವರೂಪಗಳಲ್ಲಿ ಚಾಲ್ತಿಯಲ್ಲಿದ್ದು, ಅದನ್ನು ಸಮರ್ಥವಾಗಿ ಎದುರಿಸಬೇಕಾದರೆ ಅಂಬೇಡ್ಕರ್ ಕುರಿತ ಗಂಭೀರ ಅಧ್ಯಯನದ ಅಗತ್ಯವಿದೆ ಎಂದು ಸರಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಕಾವಲಮ್ಮ ತಿಳಿಸಿದ್ದಾರೆ.
ಸಮತಾ ಸೈನಿಕ ದಳ ಗಾಂಧಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೆ ಜನ್ಮದಿನಾಚರಣೆ ಪ್ರಯುಕ್ತ ಕೊಡಮಾಡಿದ ‘ಭೀಮರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮನುವಾದವು ಬುದ್ಧನ ಕಾಲದಿಂದ ಇಲ್ಲಿಯವರೆಗೂ ಭಿನ್ನಭಿನ್ನ ಸ್ವರೂಪಗಳಲ್ಲಿ ಸಮಾಜದಲ್ಲಿ ಅಸಮಾನತೆಯನ್ನು ಬಿತ್ತುವಲ್ಲಿ ಯಶಸ್ವಿಯಾಗುತ್ತಾ ಬರುತ್ತಿದೆ. ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಕಂಡುಹಿಡಿದ ಆಧುನಿಕ ಸಲಕರಣೆಗಳನ್ನು ತಮ್ಮ ಕೈವಶ ಮಾಡಿಕೊಂಡು ಜನತೆಯಲ್ಲಿ ವೌಢ್ಯಾಚರಣೆ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ವಿಷಾದಿಸಿದರು.
ಮನುವಾದದ ವಿರುದ್ಧ ಹೋರಾಡುವುದೆಂದರೆ ಅದು ಸಮಾನತೆ, ಸ್ವಾತಂತ್ರ ಹಾಗೂ ಸಹೋದರತೆಗಾಗಿ ಹೋರಾಟ ನಡೆಸಿದಂತೆ. ಹೀಗಾಗಿಯೇ ಡಾ.ಅಂಬೇಡ್ಕರ್ ರ ಪ್ರತಿಯೊಂದು ಹೆಜ್ಜೆ, ನಿಲುವುಗಳು ಮನುವಾದದ ವಿರುದ್ಧವೇ ಆಗಿತ್ತು. ಆ ದಿನಗಳಲ್ಲಿ ಅಂಬೇಡ್ಕರ್ ಏಕಾಂಗಿಯಾಗಿ ಇಡೀ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವು ಸಾಗಿದರೆ ಮಾತ್ರ ನಿಜವಾದ ಸಮಾನತೆ ಸಿಗಲು ಸಾಧ್ಯವೆಂದು ಅವರು ಹೇಳಿದರು.
ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ವೆಂಕಟಸ್ವಾಮಿ ಮಾತನಾಡಿ, ಇವತ್ತು ದೇಶದಲ್ಲಿ ಶೇ.90ಕ್ಕಿಂತ ಹೆಚ್ಚು ಜನ ಅಧಿಕಾರ, ಹಣ ಸೇರಿದಂತೆ ಏನೆಲ್ಲ ಅನುಭವಿಸುತ್ತಿದ್ದಾರೋ ಅದೆಲ್ಲವೂ ಅಂಬೇಡ್ಕರ್‌ರವರು ತಮ್ಮ ಇಡೀ ಬದುಕಿನುದ್ದಕ್ಕೂ ಹೋರಾಟ ಮಾಡಿದ ಪರಿಣಾಮವಾಗಿ ಬಂದಿರುವಂತಹದ್ದು. ಆದರೆ, ದಲಿತೇತರರಿಗೆ ಈ ಬಗ್ಗೆ ಅರಿವಿಲ್ಲ. ಹೀಗಾಗಿ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಂದರೆ ಕೇವಲ ದಲಿತ ನಾಯಕ ಮಾತ್ರವೆಂದು ಭಾವಿಸಿದ್ದಾರೆ ಎಂದು ವಿಷಾದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿಧಾನಸೌಧದ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಮತಾ ಸೈನಿಕ ದಳದ ನೂರಾರು ಕಾರ್ಯಕರ್ತರು ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಗಾಂಧಿನಗರಕ್ಕೆ ಆಗಮಿಸಿದರು. ಈ ವೇಳೆ ನಂಜುಂಡ ಸ್ವಾಮಿ, ಎಚ್.ಚಂದ್ರಪ್ಪ, ಲಘುಮಯ್ಯ, ಮುನಿರಾಜಪ್ಪ, ಡಾ.ವಿಜಿಕುಮಾರ್, ಮುರಳಿ ಬಾಲಕೃಷ್ಣನ್‌ರಿಗೆ ಭೀಮರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ದನದ ಮಾಂಸ ಶ್ರೇಷ್ಠ
‘ಗೋವಿನ ಸಗಣಿ, ಗಂಜಲ, ಚರ್ಮ, ಸೇರಿದಂತೆ ಎಲ್ಲವೂ ಶ್ರೇಷ್ಠವಾಗಿರುವಾಗ ಅದರ ಮಾಂಸ ಯಾಕೆ ಶ್ರೇಷ್ಠವಲ್ಲ. ದನದ ಮಾಂಸವನ್ನು ತಿನ್ನುವ ಮೂಲಕ ಬಡ ಜನತೆ ಪೌಷ್ಟಿಕಾಂಶವನ್ನು ಪಡೆದುಕೊಳ್ಳುವುದು ಕೂಡ ಶ್ರೇಷ್ಠವಾದ ಕೆಲಸವಲ್ಲವೆ?
-ಕಾವಲಮ್ಮ ಪ್ರಾಧ್ಯಾಪಕಿ, ಸರಕಾರಿ ಕಲಾ ಕಾಲೇಜು







