ಒಗ್ಗಟ್ಟಿಗೆ ಎಂದೂ ಸೋಲಾಗದು: ಡಾ.ಜಿ.ಪರಮೇಶ್ವರ್
ಬೆಂಗಳೂರು, ಎ.14: ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಶ್ರಮಿಸಿದರೆ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ. ಇದಕ್ಕೆ ಉಪ ಚುನಾವಣೆಯಲ್ಲಿನ ಗೆಲುವು ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ, ಬಾಬಾ ಸಾಹೇಬ್, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಅಭ್ಯರ್ಥಿಗಳ ಆಯ್ಕೆಯನ್ನು ಶೀಘ್ರವಾಗಿ ಮಾಡಲು ಮುಂದಾಗಿದ್ದೇವೆ. ಹೈಕಮಾಂಡ್ ಜೊತೆ ಈ ಸಂಬಂಧ ಚರ್ಚೆ ಮಾಡಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ. 2018ರ ಚುನಾವಣೆಯಲ್ಲಿ 125 ಸ್ಥಾನ ಗೆಲ್ಲುತ್ತೇವೆ. ಅದೇನು ಕಷ್ಟವಾಗುವುದಿಲ್ಲ. ಆದರೆ, ಸ್ವಲ್ಪಪ್ರಯತ್ನ ಮಾಡಬೇಕೆಂದರು.
ಗೀತಾಗೆ ಸಚಿವ ಸ್ಥಾನ?: ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು. ಶುಕ್ರವಾರ ದೆಹಲಿಗೆ ತೆರಳಿ ಈ ಬಗ್ಗೆ ಸಿಎಂ ವರಿಷ್ಠರ ಜೊತೆ ಮಾತನಾಡಲಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ಸಚಿವ ಸಂಪುಟಕ್ಕೆ ಪರಿಗಣಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.
ದಲಿತ ಸಿಎಂ ಭಾಗ್ಯ ನೀಡಿ: ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಪ್ರಧಾನಿ, ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಸಿಗುವಂತಾಗಬೇಕು. ರಾಜ್ಯಕ್ಕೆ ಎಲ್ಲ ಭಾಗ್ಯಗಳನ್ನ ನೀಡಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಸಿಎಂ ಭಾಗ್ಯವನ್ನೂ ನೀಡಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ರಾಣಿ ಸತೀಶ್, ಸಂಸದ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಸಿ.ನಾರಾಯಣಸ್ವಾಮಿ ಸೇರಿ ಪ್ರಮುಖರು ಹಾಜರಿದ್ದರು.