ಸರ್ಕಾರಿ ಸಂಸ್ಥೆ, ಬ್ಯಾಂಕ್ ಹುದ್ದೆಗೆ ಇನ್ನು ಕ್ಯಾಂಪಸ್ ಆಯ್ಕೆ ಇಲ್ಲ
ಹೊಸದಿಲ್ಲಿ ಎ.15: ಕೇಂದ್ರ ಸರ್ಕಾರಿ ಉದ್ದಿಮೆಗಳು ಮತ್ತು ಬ್ಯಾಂಕ್‌ಗಳಿಗೆ ಕ್ಯಾಂಪಸ್ ಆಯ್ಕೆ ಮೂಲಕ ನೇಮಕ ಮಾಡಿಕೊಳ್ಳುವ ಕ್ರಮವನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಸ್ಥಗಿತಗೊಳಿಸಲಿದೆ. ಈ ಆಯ್ಕೆ ಪ್ರಕ್ರಿಯೆ ಸಂವಿಧಾನಕ್ಕೆ ವಿರುದ್ಧವಾದದ್ದು ಹಾಗೂ ಸುಪ್ರೀಂಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗುವಂಥದ್ದು ಎಂದು ಕಾನೂನು ಸಚಿವಾಲಯ ಅಭಿಪ್ರಾಯ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ.
ಕೇಂದ್ರ ಸರ್ಕಾರಿ ಉದ್ದಿಮೆಗಳು ಕ್ಯಾಂಪಸ್ ನೇಮಕಾತಿ ಮಾಡಿಕೊಳ್ಳುವ ಕ್ರಮ, 2015ರ ಸೆಪ್ಟೆಂಬರ್ 7ರಂದು ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸಂವಿಧಾನಕ್ಕೆ ವಿರುದ್ಧವಾದದ್ದು ಹಾಗೂ ತಾರತಮ್ಯಕ್ಕೆ ಕಾರಣವಾಗುವಂಥದ್ದು ಎಂದು ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ನಿರ್ದೇಶನದ ಬಳಿಕ, 20114ರಲ್ಲಿ ಪಿಎಸ್‌ಯುಗಳು ತಮ್ಮ ಹುದ್ದೆಗಳಿಗೆ ಪ್ರಮುಖ ಖಾಸಗಿ ಅತ್ಯುನ್ನತ ಕಾಲೇಜುಗಳಲ್ಲಿ ಕ್ಯಾಂಪಸ್ ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿತ್ತು. ಇದರಿಂದ ಸರ್ಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ಆಕ್ಷೇಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಆದರೆ 2015ರ ಸೆಪ್ಟೆಂಬರ್‌ನಲ್ಲಿ ಈ ನಿಷೇಧವನ್ನು ರದ್ದುಪಡಿಸಿ, ಉತ್ತಮ ಪ್ರತಿಭೆಗಳು ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುವುದನ್ನು ತಪ್ಪಿಸಲು ಈ ಕ್ರಮಕ್ಕೆ ಅವಕಾಶ ನೀಡಬಹುದು ಎಂದು ಹೈಕೋರ್ಟ್ ಹೇಳಿತು. ಆದರೆ ಸುಪ್ರೀಂಕೋರ್ಟ್ 2013ರ ಎಪ್ರಿಲ್‌ನಲ್ಲಿ ಮುಂಬೈ ಹೈಕೋರ್ಟ್ ತೀರ್ಪು ಎತ್ತಿಹಿಡಿದು, ಇದು ವಿದ್ಯಾರ್ಥಿಗಳ ಹಕ್ಕನ್ನು ಉಲ್ಲಂಘಿಸುವ ಕ್ರಮ ಎಂದು ಸ್ಪಷ್ಟಪಡಿಸಿತ್ತು. ಸಂವಿಧಾನದ 141ನೆ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ತೀರ್ಪು ದೇಶದ ಎಲ್ಲೆಡೆಗೂ ಅನ್ವಯವಾಗುವುದರಿಂದ ಕ್ಯಾಂಪಸ್ ನೇಮಕಾತಿ ರದ್ದುಪಡಿಸಲಾಗುತ್ತಿದೆ ಎಂದು ಕಾನೂನು ವಿಭಾಗ ಸ್ಪಷ್ಟಪಡಿಸಿದೆ.