ಅಪಘಾತ ಎಸಗಿ ರಾಜಾರೋಷವಾಗಿ ಪರಾರಿಯಾದ ಹಿಂದೂ ಯುವ ವಾಹಿನಿ ಸದಸ್ಯನ ಕಾರು

ಹೊಸದಿಲ್ಲಿ, ಎ.15: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಂದ ಸ್ಥಾಪಿತ ಹಿಂದೂ ಯುವ ವಾಹಿನಿಯ ಪದಾಧಿಕಾರಿಯೊಬ್ಬನದೆಂದು ತಿಳಿಯಲಾದ ಕಾರು ಬೈಕ್ ಒಂದಕ್ಕೆ ಢಿಕ್ಕಿ ಹೊಡೆದ ನಂತರವೂ ಯಾವುದೇ ಮುಲಾಜಿಲ್ಲದೆ ಮುಂದೆ ಸಾಗಿದ ಘಟನೆಯ ವೀಡಿಯೋವೊಂದು ವೈರಲ್ ಆಗಿ ಬಿಟ್ಟಿದೆ.
ಫೇಸ್ ಬುಕ್ ಪುಟವೊಂದರಲ್ಲಿ ಶುಕ್ರವಾರ ತಡ ರಾತ್ರಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯ ತನಕ ಇದನ್ನು 5 ಲಕ್ಷ ಮಂದಿ ವೀಕ್ಷಿಸಿದ್ದಾರಲ್ಲದೆ 15,000ಕ್ಕೂ ಅಧಿಕ ಜನರು ಶೇರ್ ಮಾಡಿದ್ದಾರೆ.
ವೀಡಿಯೋದಲ್ಲಿ ಕೇಸರಿ ಶಾಲು ಧರಿಸಿದ ವ್ಯಕ್ತಿಯೊಬ್ಬ ತನ್ನ ಟಾಟಾ ಎಸ್ ಯು ವಿ ವಾಹನದ ಎದುರಿನ ಭಾಗವನ್ನು ಸರಿಪಡಿಸುತ್ತಿರುವಂತೆ ಕಾಣುತ್ತದೆ. ಬೈಕಿಗೆ ಢಿಕ್ಕಿ ಹೊಡೆದ ಕಾರಣ ಆ ಭಾಗದಲ್ಲಿ ಹಾನಿಯುಂಟಾಗಿದೆ ಎಂಬುದು ಸ್ಪಷ್ಟ. ನಂತರ ಆ ವ್ಯಕ್ತಿ ಅಲ್ಲಿ ತನ್ನ ವಾಹನ ನಿಲ್ಲಿಸದೆ ಮುಂದೆ ಸಾಗುವ ಭರದಲ್ಲಿ ಆತನ ಕಾರು ಢಿಕ್ಕಿ ಹೊಡೆದಿದ್ದ ಬೈಕ್ ಮೇಲೆಯೇ ಚಲಿಸುವುದೂ ಕಾಣಿಸುತ್ತದೆ.
ಈ ಕಾರಿಗೆ ನೊಯ್ಡ ರಿಜಿಸ್ಟ್ರೇಶನ್ ಸಂಖ್ಯೆಯಿದ್ದು (ಯುಪಿ 16 ಬಿಎಲ್ 2333) ಈ ಘಟನೆ ನೊಯ್ಡ ಅಥವಾ ಗ್ರೇಟರ್ ನೊಯ್ಡದಲ್ಲಿ ನಡೆದಿರಬಹುದೆಂದು ಊಹಿಸಲಾಗಿದೆ.
ಅಲ್ಲಿ ನೆರೆದಿದ್ದ ಕೆಲವರ ಸಂಭಾಷಣೆ ಕೂಡ ವೀಡಿಯೋದಲ್ಲಿ ದಾಖಲಾಗಿದ್ದು, ಅವರ ಪ್ರಕಾರ ಆ ಕಾರು ಬೈಕಿಗೆ ಢಿಕ್ಕಿ ಹೊಡೆದ ಭರದಲ್ಲಿ ಸವಾರನನ್ನು ಕೆಲ ಮೀಟರುಗಳಷ್ಟು ದೂರ ಎಳೆದುಕೊಂಡು ಹೋಗಿದೆ.
ಈ ಘಟನೆ ಯಾವಾಗ ನಡೆದಿದೆಯೆಂದು ಇನ್ನೂ ತಿಳಿದು ಬಂದಿಲ್ಲವಾದರೂ ವೀಡಿಯೋ ಗಮನಿಸಿದಾಗ ಇತ್ತೀಚಿಗಿನ ಘಟನೆಯಾಗಿರಬಹುದೆಂದು ಅಂದಾಜಿಸಲಾಗಿದೆ.







