ಈ ‘ಪವಿತ್ರ’ ನಿಂಬೆ ಹಣ್ಣಿನ ಬೆಲೆ ರೂ. 27,000!

ವಿಲ್ಲುಪುರಂ, ಎ.15: ಒಂದು ನಿಂಬೆ ಹಣ್ಣಿನ ಬೆಲೆ ಹೆಚ್ಚೆಂದರೆ ಐದಾರು ರೂಪಾಯಿ ಇರಬಹುದು. ಆದರೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರವನೈನಲ್ಲೂರಿನಲ್ಲಿರುವ ಬಲತಂಡಯುತ್ತಪನಿ ದೇವಸ್ಥಾನದಲ್ಲಿರುವ ಆರಾಧ್ಯ ದೇವರು ಮುರುಗನ ಮೂರ್ತಿಯ ಎದುರಿರುವ ಈಟಿಗೆ ಸಿಕ್ಕಿಸಲಾಗಿರುವ ನಿಂಬೆ ಹಣ್ಣುಗಳ ಬೆಲೆ ಮಾತ್ರ ನಂಬಲಸಾಧ್ಯ.
ಹೀಗೆ ಮೂರ್ತಿಯ ಎದುರಿಗಿರುವ ಈಟಿಗೆ ದೇವಳದ 11 ದಿನಗಳ ಪಂಗುನಿ ಉತ್ತಿರಂ ಜಾತ್ರೆಯ ಸಮಯ ಸಿಕ್ಕಿಸಲಾಗಿದ್ದ ನಿಂಬೆ ಹಣ್ಣುಗಳನ್ನು ಹರಾಜು ಹಾಕಿ ದೇವಳದ ಆಡಳಿತವು 68,000 ರೂ. ಆದಾಯ ಗಳಿಸಿದೆ. ಇದರಲ್ಲಿ ಒಂದು ನಿಂಬೆ ಹಣ್ಣು ಬರೋಬ್ಬರಿ ರೂ 27,000ಕ್ಕೆ ಮಾರಾಟವಾಗಿದೆ.
ಜಾತ್ರೆಯ ಸಂದರ್ಭ ಒಂಬತ್ತು ದಿನಗಳಲ್ಲಿ ಪ್ರತೀದಿನ ಒಂದು ನಿಂಬೆ ಹಣ್ಣನ್ನು ಈಟಿಗೆ ಸಿಕ್ಕಿಸಲಾಗುತ್ತದೆ. ಇಂತಹ ನಿಂಬೆ ಹಣ್ಣು ಜೀವನವನ್ನು ಸಂಪದ್ಭರಿತವಾಗಿಸುವ ಶಕ್ತಿ ಹೊಂದಿದೆ ಎಂದು ಆಸುಪಾಸಿನ ಪ್ರದೇಶಗಳ ಜನರು ನಂಬಿದ್ದಾರಲ್ಲದೆ ಸಂತಾನಭಾಗ್ಯವಿಲ್ಲದ ದಂಪಗೆ ಸಂತಾನವನ್ನು ಒದಗಿಸುವುದು ಎಂಬ ನಂಬಿಕೆಯೂ ಇದೆ.
ಜಾತ್ರೆಯ ಪ್ರಥಮ ದಿನದಿಂದ ಈಟಿಗೆ ಸಿಕ್ಕಿಸಲಾಗುವ ನಿಂಬೆ ಹಣ್ಣು ‘‘ಅತ್ಯಂತ ಪವಿತ್ರ ಹಾಗೂ ಶಕ್ತಿಶಾಲಿ’’ ಎಂದು ತಿಳಿಯಲಾಗುತ್ತದೆ. ಇದನ್ನು ಒತ್ತನಂತಲ್ ಎಂಬಲ್ಲಿನ ಮಹಾಲಿಂಗಂ, ಜಯಂತಿ ದಂಪತಿ ರೂ 27,000 ಕೊಟ್ಟು ಖರೀದಿಸಿದ್ದಾರೆ. ದಂಪತಿಗೆ ಮಕ್ಕಳಿದ್ದರೂ ಜೀವನದಲ್ಲಿ ಸುಖ ಸಂತೋಷ, ಆರೋಗ್ಯ ಭಾಗ್ಯಕ್ಕಾಗಿ ಅವರು ಇದನ್ನು ಖರೀದಿಸಿದ್ದಾರೆಂದು ಗ್ರಾಮದ ಹಿರಿಯರೊಬ್ಬರು ಹೇಳಿದ್ದಾರೆ. ಎರಡನೆ ಹಾಗೂ ಮೂರನೆ ದಿನದ ನಿಂಬೆಹಣ್ಣುಗಳು ತಲಾ ರೂ.6,000ಕ್ಕೆ ಮಾರಾಟವಾದರೆ, ನಾಲ್ಕನೆ ದಿನದ ನಿಂಬೆಹಣ್ಣು ರೂ.5,800ಕ್ಕೆ ಹರಾಜಾಗಿದೆ.
ಕಳೆದ ವರ್ಷ ಜಾತ್ರೆಯ ಮೊದಲ ದಿನದಂದು ಉಪಯೋಗಿಸಲಾದ ನಿಂಬೆಹಣ್ಣು ರೂ.39,000ಕ್ಕೆ ಮಾರಾಟವಾಗಿತ್ತಲ್ಲದೆ, ಎಲ್ಲಾ ನಿಂಬೆ ಹಣ್ಣುಗಳ ಮಾರಾಟದಿಂದ ರೂ.57,722 ಆದಾಯವನ್ನು ದೇವಳ ಗಳಿಸಿತ್ತು.
ನಲ್ವತ್ತು ವರ್ಷಗಳ ಹಿಂದೆ ಈ ನಿಂಬೆಹಣ್ಣುಗಳನ್ನು ದೇವಳದ ಆಡಳಿತ ಭಕ್ತರಿಗೆ ಉಚಿತವಾಗಿ ನೀಡುತ್ತಿದ್ದರೆ, ಇತ್ತೀಚಿಗಿನ ವರ್ಷಗಳಲ್ಲಿ ಅವುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಹರಾಜು ಮಾಡಲಾಗುತ್ತಿದೆ.







