ಐಸ್‌ಕ್ರೀಮ್ ಮಾರಿ ಲಕ್ಷ ರೂ. ಸಂಪಾದಿಸಿದ ತೆಲಂಗಾಣ ಸಿಎಂ ಪುತ್ರ!

ಹೈದರಾಬಾದ್, ಎ.15: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಪುತ್ರ ಹಾಗೂ ಸಂಪುಟ ಸಚಿವ ಕೆ.ಟಿ.ರಾಮ ರಾವ್ ಅವರು ಕೆಲವೇ ಗಂಟೆಗಳಲ್ಲಿ ಐಸ್‌ಕ್ರೀಮ್ ಹಾಗೂ ಹಣ್ಣಿನ ಜ್ಯೂಸ್‌ನ್ನು ಮಾರಾಟ ಮಾಡುವ ಮೂಲಕ 7.30 ಲಕ್ಷ ರೂ. ಸಂಪಾದಿಸಿದ್ದಾರೆ.
ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸ್ಥಾಪನಾ ದಿನಾಚರಣೆಯಂದು ನಡೆಯಲಿರುವ ಸಾರ್ವಜನಿಕ ಸಮಾರಂಭಕ್ಕೆ ತೆರಳಲು ಸಾರಿಗೆ ಹಾಗೂ ಇತರ ಖರ್ಚಿಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಒಂದು ವಾರ ಕೂಲಿ ಆಗಿ ಕೆಲಸ ಮಾಡುವಂತೆ ಪಕ್ಷದ ಎಲ್ಲ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಸಚಿವ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಚಂದ್ರಶೇಖರ್ ಇತ್ತೀಚೆಗೆ ಕರೆ ನೀಡಿದ್ದರು. ಸಿಎಂ ಮಾತನ್ನು ಪಾಲಿಸಿರುವ ರಾಮರಾವ್ ಕೂಲಿಯಾಗಿ ಪರಿವರ್ತಿತರಾಗಿದ್ದಾರೆ.
ಖುತುಬುಲ್ಲ್ಲಾಪುರ ಪ್ರದೇಶದ ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ರಾಜ್ಯದ ಕೈಗಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಐಸ್‌ಕ್ರೀಮ್ ಮಾರಾಟ ಮಾಡಿದ್ದಾರೆ. ಟಿಆರ್‌ಎಸ್ ಸಂಸದ ಮಲ್ಲ ರೆಡ್ಡಿ 5 ಲಕ್ಷ ರೂ. ನೀಡಿ ಐಸ್‌ಕ್ರೀಂ ಖರೀದಿಸಿದ್ದಾರೆ. ಪಕ್ಷದ ಇನ್ನೋರ್ವ ಮುಖಂಡ ಶ್ರೀನಿವಾಸ್ ರೆಡ್ಡಿ 1 ಲಕ್ಷ ರೂ. ನೀಡಿ ಐಸ್‌ಕ್ರೀಂ ತಿಂದಿದ್ದಾರೆ.
ರಾಮರಾವ್ ಹಣ್ಣಿನ ಜ್ಯೂಸ್ ಮಾರಾಟದಿಂದ 1.30 ಲಕ್ಷ ರೂ. ಸಂಪಾದಿಸಿದ್ದಾರೆ. ಪಕ್ಷದ ನಾಯಕರು ರಾವ್‌ರಿಂದ ಜ್ಯೂಸ್ ಖರೀದಿಸಿದ್ದಾರೆ.
ಮುಖ್ಯಮಂತ್ರಿ, ಎಲ್ಲ ಸಚಿವರು, ಸಂಸದರು, ಶಾಸಕರು ಹಾಗೂ ಇತರ ನಾಯಕರು ಕನಿಷ್ಠ ಎರಡು ದಿನಗಳ ಕಾಲ ಕೂಲಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಎ.14 ರಿಂದ 20ರ ತನಕ ‘ಗುಲಾಬಿ ಕೂಲಿ ಡೇ’ ಆಚರಿಸುವಂತೆ ಕರೆ ನೀಡಲಾಗಿದೆ.