ಎ.17ರಂದು ಮಂಗಳೂರು ವಿವಿಯಲ್ಲಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭ

ಕೊಣಾಜೆ, ಎ.15: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಎ.17ರಂದು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಪೂರ್ವಾಹ್ನ 11:30ಕ್ಕೆ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪವಹಿಸಲಿದ್ದಾರೆ. ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕ ಡಾ.ಪಿ.ದಯಾನಂದ ಪೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಕೆ.ಚಿನ್ನಪ್ಪಗೌಡ ಅಭಿನಂದನಾ ಭಾಷಣ ಮಾಡುವರು. ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥದಾರಿ, ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪಹಾಗೂ ಯಕ್ಷಗಾನ ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಅವರಿಗೆ ಯಕ್ಷಮಂಗಳ ಪ್ರಶಸ್ತಿ ಮತ್ತು ಡಾ.ವಸಂತ ಭಾರದ್ವಾಜ ಅವರ ‘ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುನ್ನ ಬೆಳಗ್ಗೆ 10:30ರಿಂದ ಪುಂಡಿಕಾ ಗೋಪಾಲ ಕೃಷ್ಣ ಭಟ್ ಮತ್ತು ಪ್ರದೀಪ್ ಕುಮಾರ್ ಗಟ್ಟಿ ಅವರಿಂದ ಯಕ್ಷಗಾನ ‘ಗಾನ ವೈಭವ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ವಿದ್ಯಾರ್ಥಿ ಕಲಾವಿದರಿಂದ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







